ಸೋಮವಾರ, ಸೆಪ್ಟೆಂಬರ್ 24, 2012

       ಬಿ-೧ ಜೀವಸತ್ವ                               ೧೯-೭-೨೦೦೫

                 ಸಂಜೀವಿನಿ ಗುಣದ ಜೀವಸತ್ವ ಬಿ-೧                                              

ಬಿ-೧ ಜೀವಸತ್ವದ ಕೊರತೆಯಿಂದ ಹಲವು ರೀತಿಯ ಮಾನಸಿಕ ಹಾಗೂ ದೈಹಿಕ ತೊಂದರೆಗಳು ಕಂಡುಬರುತ್ತವೆ.

     ನಾಗರತ್ನ ತನ್ನ ಗಂಡನ ಸ್ವಭಾವದಲ್ಲಿ ಇತ್ತೀಚೆಗೆ ಅನೇಕ ಬದಲಾವಣೆಗಳಾಗಿರುವುದನ್ನು ಗಮನಿಸಿದಳು. ಸದಾ ಉಲ್ಲಾಸದಿಂದ ಇರುತ್ತಿದ್ದ ಗಂಡ ಚಿಂತೆಯಿಂದ ಮುಂಗೋಪಿಯಾಗಿದ್ದ. ಎಷ್ಟೇ ಚೆನ್ನಾಗಿ ಅಡುಗೆ ಮಾಡಿದ್ದರೂ ಊಟಮಾಡಲು ಒಪ್ಪುತ್ತಿರಲಿಲ್ಲ. ತನ್ನ ಸಂಸಾರ, ನೆರೆ-ಹೊರೆ, ಸ್ನೇಹಿತರ ಬಗ್ಗೆ ಆಸಕ್ತಿ, ಉತ್ಸಾಹ ಕಳೆದುಕೊಂಡು ಸದಾ ಮೌನಿಯಾಗಿರುತ್ತಿದ್ದ. ತೀವ್ರವಾದ ತಲೆನೋವು, ಓಡಾಡಿದರೆ ತಲೆ ತಿರುಗುವುದು, ತಲೆ ಅಲ್ಲಾಡಿಸಿದರೆ ಕಿವಿಯಲ್ಲಿ ಗುಂಯ್ ಎಂಬ ಶಬ್ದ ಕೇಳಿಸುತ್ತದೆಂದು ಹೇಳುತ್ತಿದ್ದ. ಇತ್ತೀಚೆಗಂತೂ ಪತ್ನಿಯ ಮೇಲೆ ಪದೇಪದೇ ರೇಗುತ್ತಾನೆ. ಸಣ್ಣ-ಸಣ್ಣ ವಿಚಾರಗಳಿಗೂ ಜಗಳ ಮಾಡುತ್ತಾನೆ. ಏನೋ ಕಳೆದುಕೊಂಡವನಂತೆ ಏಕಾಂಗಿಯಾಗಿ ಕುಳಿತು ಎತ್ತಲೋ ನೋಡುತ್ತಾ ಇರುತ್ತಾನೆ. ತಾನು ಮನೆಯಿಂದ ಓಡಿಹೋಗುವುದಾಗಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಡಬಡಿಸುತ್ತಾನೆ. ತನ್ನ ಪ್ರತಿಬಿಂಬವನ್ನು ನೋಡಿ ದ್ವೇಷ ಕಾರುತ್ತಾನೆ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಎಚ್ಚರವಾಗಿರುತ್ತಾನೆ. ಎದೆಯಲ್ಲಿ ಉರಿ, ಮಲಬದ್ಧತೆಗಳು ಕಾಡುತ್ತಿವೆ. ಆಗಿಂದಾಗ್ಗೆ ದುರ್ವಾಸನೆಯಿಂದ ಕೂಡಿದ ವಾಯು ಬಿಡುತ್ತಿರುತ್ತಾನೆ. ಸದಾ ಆಯಾಸಗೊಂಡವರಂತೆ ಕಾಣಿಸುತ್ತಾನೆ. ಈತನ ಈ ಎಲ್ಲ ಲಕ್ಷಣಗಳಿಗೆ ಕಾರಣ ಅವನಲ್ಲಿ 'ಬಿ-೧' ಜೀವಸತ್ವದ ಕೊರತೆ.
  ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಬಿ-೧ ಜೀವಸತ್ವದ ಕೊರತೆಯಿಂದ ಚಿತ್ತ ಏಕಾಗ್ರತೆ ಇಲ್ಲದೆ ಮೊಂಡುತನ ಹಾಗೂ ಸೋಮಾರಿತನ ಉಂಟಾಗುತ್ತದೆ. ಗುರುಗಳು, ತಂದೆ-ತಾಯಿ, ಪರಕೀಯರನ್ನು ಕಂಡರೆ ಮಕ್ಕಳು ಭಯಪಡುತ್ತಾರೆ. ಶಾಲೆಗೆ ಹೋಗಲು ಒಪ್ಪುವುದಿಲ್ಲ. ಸ್ನೇಹಿತರೊಂದಿಗೆ ಆಟ ಆಡಲು ಹೋಗುವುದಿಲ್ಲ. ತರಗತಿಯಲ್ಲಿ ಗುರುಗಳು ಪಾಠಮಾಡುವಾಗ ನಿದ್ದೆ ಮಾಡುತ್ತಾರೆ. ಬಹಳ ದಣಿದವರಂತೆ ಮನೆಗೆ ಬಂದೊಡನೆ ಮಲಗಲು ಬಯಸುತ್ತಾರೆ. ಅದನ್ನು ಯಾರಾದರೂ ವಿರೋಧಿಸಿದರೆ ಜಗಳ ಮಾಡುತ್ತಾರೆ.
  ಈ ಹಂತದಲ್ಲಿ ಮಕ್ಕಳಿಗೆ ಬಿ-೧ ಜೀವಸತ್ವ ಚಿಕಿತ್ಸೆ ಕೊಡದಿದ್ದರೆ ಅವರ ಪರಿಸ್ಥಿತಿ ಇನ್ನಷ್ಟು ಕೆಡುತ್ತದೆ. ಓಡಾಡುವಾಗ, ಮೆಟ್ಟಲುಗಳನ್ನು ಹತ್ತುವಾಗ ಉಸಿರಾಡಲು ಕಷ್ಟಪಡುತ್ತಾರೆ. ಕಾಲುಗಳು ಊದಿಕೊಳ್ಳುತ್ತವೆ. ಬುದ್ಧಿಶಕ್ತಿಗೆ ಮಂಕು ಕವಿಯುತ್ತದೆ. ಯೋಚನಾಶಕ್ತಿ ಕಳೆದುಕೊಳ್ಳುತ್ತಾರೆ. ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಕಾಲುಗಳು ಜಡವಾಗಿ ಭಾರವಾಗುತ್ತವೆ. ಯಾವುದೇ ರೀತಿಯ ಶಬ್ದ ಸಹಿಸುವುದಿಲ್ಲ. ಪ್ರಾಣ ಭಯದಿಂದ ಹೊರಗೆ ಹೋಗದೆ ಮನೆಯಲ್ಲೇ ಇರುತ್ತಾರೆ. ರೋಗ ನಿರೋಧಕ ಶಕ್ತಿ ಕುಗ್ಗಿ ವಿವಿಧ ರೋಗಗಳಿಗೆ ಬಲಿಯಾಗುತ್ತಾರೆ. ಇವೆಲ್ಲವೂ ಬಿ-೧ ಜೀವಸತ್ವ ಕೊರತೆಯ ಲಕ್ಷಣಗಳೇ.
  ಥಿಯಾಮಿನ್ ಹೈಡ್ರೋಕ್ಲೋರೈಡ್ ರೂಪದಲ್ಲಿರುವ ಬಿ-೧ ಜೀವಸತ್ವ ಬಿಳುಪಾದ ಸ್ಪಟಿಕದಂಥ ಪದಾರ್ಥ, ನೀರಿನಲ್ಲಿ ಕರಗುತ್ತದೆ. ಪ್ರತಿನಿತ್ಯ ೦.೫ ರಿಂದ ೧.೫ ಮಿಲಿ ಗ್ರಾಂ ನಷ್ಟು ಬಿ-೧ ಜೀವಸತ್ವ ಮನುಷ್ಯನಿಗೆ ಬೇಕು. ಈ ಜೀವಸತ್ವ ದೇಹದಲ್ಲಿ ನರಕೋಶಗಳಿಗೆ ಶಕ್ತಿಯನ್ನು ಒದಗಿಸುವುದರೊಂದಿಗೆ ಅವುಗಳ ರಕ್ಷಣೆಯನ್ನೂ ಮಾಡುತ್ತದೆ. ಆದ್ದರಿಂದ ಬಿ-೧ ಜೀವಸತ್ವವನ್ನು ನರಸಂಬಂಧಿ ರೋಗಗಳಾದ ಸ್ನಾಯು ಸೆಳೆತ, ಚಳಕು, ನಿಶ್ಶಕ್ತಿ, ಸ್ಪರ್ಶನಾಶ, ಮೂಳೆ ಜರುಗುವಿಕೆ, ಪಾರ್ಶ್ವವಾಯು ಚಿಕಿತ್ಸೆಗಳಲ್ಲಿ ಉಪಯೋಗಿಸಲಾಗುತ್ತದೆ.
  ಹೃದಯ ಸಂಬಂಧಿ ಕಾಯಿಲೆ, ಬೆರಿಬೆರಿ ರೋಗದಲ್ಲಿ ಥಿಯಾಮಿನ್ ನ ಕೊರತೆ ಕಂಡುಬರುತ್ತದೆ. ನೆತ್ತಿಯ ಮೇಲ್ಭಾಗದ ರಕ್ತ ಪರಿಚಲನೆಗೆ ಬಿ-೧ ಜೀವಸತ್ವ ಬೇಕೇಬೇಕು. ಅಜೀರ್ಣ ಮತ್ತು ಮಲಬದ್ಧತೆಯಿಂದ ಉಂಟಾಗುವ ವೇಗದ ಹೃದಯ ಬಡಿತ, ಹೃದಯದ ಅಸಮರ್ಪಕ ಕೆಲಸ, ಬಲಭಾಗದ ಹೃದಯಸ್ತಂಭನವಾದಾಗ ನೀಡುವ ಚಿಕೆತ್ಸೆಯಲ್ಲಿಯೂ ಬಿ-೧ ಜೀವಸತ್ವ ಬಳಸುತ್ತಾರೆ.
  ಸಾಮಾನ್ಯವಾಗಿ ಹೊಟ್ಟೆ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಈ ಬಿ-೧ ಜೀವಸತ್ವದ ಕೊರತೆ ಕಂಡುಬರುತ್ತದೆ. ಹೊಟ್ಟೆಯ ಹಾಗೂ ಕರುಳು ಸಂಬಂಧಿ ಕಾಯಿಲೆ ಇರುವವರು ನಿತ್ಯವೂ ಬಿ-೧ ಜೀವಸತ್ವ ಸೇವಿಸುವುದು ಒಳ್ಳೆಯದು.  ಬಹುಕಾಲದ ಕೆಮ್ಮು ಸಹಾ ಬಿ-೧ ಜೀವಸತ್ವದ ಬಳಕೆಯಿಂದ ಕಡಿಮೆಯಾಗುತ್ತದೆ. ಗರ್ಭಿಣಿಯರು ಬಿ-೧ ಜೀವಸತ್ವವನ್ನು ಕ್ರಮವಾಗಿ ಉಪಯೋಗಿಸುವುದರಿಂದ ಹೆರಿಗೆ ಸುಲಭವಾಗುತ್ತದೆ. ಕಣ್ಣಿನ ನರಗಳ ತೊಂದರೆ, ಮಕ್ಕಳಲ್ಲಿ ಪಾರ್ಶ್ವವಾಯು, ದೇಹದ ನರಗಳ ತೊಂದರೆ, ಮರೆವು, ಮುಂಗೋಪ, ಆಯಾಸ, ಹೊಟ್ಟೆಯಲ್ಲಿ ಹುಣ್ಣು...... ಇತ್ಯಾದಿಗಳು ಕಂಡುಬಂದಾಗ ತಪ್ಪದೆ ಬಿ-೧ ಜೀವಸತ್ವ ಕೊಡಿಸುವುದು ಒಳ್ಳೆಯದು.
  ಅಕ್ಕಿಯನ್ನು ಗಿರಣಿಯಲ್ಲಿ ಪಾಲೀಶ್ ಮಾಡುವಾಗ ಸಾಕಷ್ಟು ಪ್ರಮಾಣದಲ್ಲಿ ಈ ಜೀವಸತ್ವ ನಾಶವಾಗುತ್ತದೆ. ಬಿ-೧ ಜೀವಸತ್ವದ ದೈನಂದಿನ ಪೂರೈಕೆಯು ನಾವು ಸೇವಿಸುವ ಕಾರ್ಬೋಹೈಡ್ರೇಟ್ ಅನ್ನು ಅವಲಂಬಿಸಿದೆ. ದೇಹದಲ್ಲಿ ಶಕ್ತಿ ಬಿಡುಗಡೆಯಾಗಲು, ದೈಹಿಕ ಬೆಳವಣಿಗೆ, ಹಸಿವು ಉಂಟಾಗಲು, ಪಚನಕ್ರಿಯೆ ಹಾಗೂ ನರಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಲ್ಲಿ ಈ ಜೀವಸತ್ವ ಪಾತ್ರ ವಹಿಸುತ್ತದೆ.
  ವಿಪರೀತ ಮದ್ಯಪಾನ ಮಾಡುವವರಲ್ಲಿಯೂ ಬಿ-೧ ಜೀವಸತ್ವದ ಕೊರತೆ ಉಂಟಾಗುತ್ತದೆ. ಅವರ ಚಲನೆಯಲ್ಲಿ ಅಸ್ಠಿರತೆ, ಗಲಿಬಿಲಿ ಉಂಟಾಗುತ್ತದೆ. ಕೆಲವರಲ್ಲಿ ರೋಗ ಉಲ್ಬಣಿಸಿ ಮರೆವು, ಹೊಸದನ್ನು ಕಲಿಯದ ಸ್ಠಿತಿ, ಮರೆವನ್ನು ಮರೆಮಾಡುವ ಪ್ರಯತ್ನ ಕಂಡುಬರುತ್ತದೆ.

               ಬಿ-೧ ಜೀವಸತ್ವಕ್ಕೆ ಇವುಗಳನ್ನು ಸೇವಿಸಿ:
ಜಾಸ್ತಿ ಪಾಲೀಶ್ ಮಾಡಿರದ ಅಕ್ಕಿ, ಬೇಳೆಕಾಳು, ಹುರುಳಿ, ಕುಸುಬಲಕ್ಕಿ, ಗೋಧಿಕಾಳು, ಹಾಲು, ಮೊಳಕೆಯೊಡೆದ ಕಾಳು, ಬಟಾಣಿ, ನೆಲಗಡಲೆ, ಅಕ್ಕಿಯ ತೌಡು, ಕೋಸು, ಮೂಲಂಗಿ ಗಳು... ಇತ್ಯಾದಿ.

ಬರೆದವರು : ಡಾ. ಎಸ್. ರವಿಕುಮಾರ ರಾರಾವಿ
ಕೃಪೆ : ವಿಜಯಕರ್ನಾಟಕ
ಸಂಗ್ರಹಿಸಿದವರು : ಹೆಚ್.ಕೆ. ಸತ್ಯಪ್ರಕಾಶ್. - ೯೮೮೬೩ ೩೪೬೬೭        ಇ-ಮೈಲ್ : ಮನುಸತ್ಯ ಅಟ್ ರಿಡಿಫ್ ಮೈಲ್.ಕಾಮ್.

ಕಾಮೆಂಟ್‌ಗಳಿಲ್ಲ: