ಮಂಗಳವಾರ, ಏಪ್ರಿಲ್ 8, 2008

ಫಿಸಿಯೋ ಥೆರಪಿ




ಹನುಮಂತನಗರದ ೫೦ ಅಡಿ ರಸ್ತೆಯಲ್ಲಿರುವ "ಸುಹಾಸ್ ಡಯಾಗ್ನೋಸ್ಟಿಕ್ ಸೆಂಟರ್" ನಲ್ಲಿ ಇತ್ತೀಚೆಗೆ ಫಿಸಿಯೋ ಥೆರಪಿ ಆರಂಭವಾಗಿದೆ.
ದಯವಿಟ್ಟು ಈ ಸ್ಥಳಕ್ಕೆ ಹತ್ತಿರವಾಗಿರುವವರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿರಿ
ಸುಹಾಸ್ ಡಯಾಗ್ನೋಸ್ಟಿಕ್ ಸೆಂಟರ್,
೫೪೮/ಏ, ೫೦ ಅಡಿ ರಸ್ತೆ, ಹನುಮಂತನಗರ, ಬೆಂಗಳೂರು-೫೬೦೦೫೦
ಫೋನ್: ೨೨೪೨ ೮೫೦೩, ೨೫೯೨ ೮೩೯೭, ೨೬೬೦ ೮೪೭೩

ಮನೆ ಮದ್ದುಗಳು

ಮನೆ ಮದ್ದು


ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.


ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.


ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.


ವಸ್ತು : ಈರುಳ್ಳಿ
ಶಮನ : ರಕ್ತಹೀನತೆ, ಗಾಯದ ನೋವು, ರಕ್ತಸ್ರಾವ.
ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು.


ವಸ್ತು : ಕಡಲೆಕಾಳು
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ವಸ್ತು : ಹಲಸಿನ ಹಣ್ಣು
ಶಮನ : ತಲೆನೋವು, ನಿತ್ರಾಣ
ಸಾಮಾನ್ಯ ತಲೆನೋವು ಇರುವಾಗ, ಸ್ವಲ್ಪ ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಮತ್ತು ಇತರರಿಗೆ ಆಗಾಗ್ಗೆ ನಿತ್ರಾಣವೆನಿಸಿದಾಗ ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದರಿಂದ ಚೈತನ್ಯ ಮೂಡುವುದು.


ವಸ್ತು : ಶುಂಠಿ
ಶಮನ : ಗಂಟಲು ಕಟ್ಟುವಿಕೆ, ಬಾಯಿ ವಾಸನೆ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.


ವಸ್ತು : ಮೆಂತ್ಯಸೊಪ್ಪು
ಶಮನ : ಸಕ್ಕರೆ ಕಾಯಿಲೆ
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿವಸ ಬೆಳಿಗ್ಗೆ ಮೆಣ್ತ್ಯಸೊಪ್ಪಿನ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು. ಮೆಂತ್ಯಸೊಪ್ಪಿನಂತೆಯೇ ಮೆಂತ್ಯ ಕೂಡ ಔಷಧೀಯ ಗುಣಗಳನ್ನು ಹೊಂದಿದೆ.


ವಸ್ತು : ಎಳ್ಳು
ಶಮನ : ಸುಟ್ಟ ಗಾಯ, ಉರಿಮೂತ್ರ
ಸುಟ್ಟಗಾಯಕ್ಕೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಎಳ್ಳು ಮತ್ತು ಸೌತೆಬೀಜವನ್ನು ಅರೆದು ಹಾಲು, ತುಪ್ಪದೊಡನೆ ಸೇರಿಸಿ ಕುಡಿಯುವುದರಿಂದ ಎಲ್ಲ ರೀತಿಯ ಕಟ್ಟು ಮೂತ್ರ ಮತ್ತು ಉರಿಮೂತ್ರ ಗುಣವಾಗುತ್ತದೆ.


ಸಾಸಿವೆ(ಮಸ್ಟರ್ಡ್)
ಶಮನ : ಹಲ್ಲು ನೋವು, ಉಪ್ಪಿನಕಾಯಿ ಶಿಲೀಂದ್ರ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.

ವಸ್ತು : ಗೋಧಿ
ಶಮನ : ಹೊಟ್ಟೆ ಹುಣ್ಣು, ಕೀಲುನೋವು
ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯಹುಣ್ಣು ನಿವಾರಣೆಯಾಗುವುದು. ಜತೆಗೆ ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.


ವಸ್ತು : ಶುಂಠಿ
ಶಮನ : ಅಜೀರ್ಣ, ನೆಗಡಿ, ಹಲ್ಲುನೋವು.
ಊಟ ಮಾಡುವುದಕ್ಕೆ ಮೊದಲು ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ಇಲ್ಲವಾಗುವುದು. ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುವುದು. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು.


ವಸ್ತು : ಜೇನುತುಪ್ಪ
ಶಮನ : ಸುಟ್ಟ ಗಾಯ, ಚರ್ಮರೋಗ.
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.


ವಸ್ತು : ಕಡಲೇ ಕಾಳು
ಶಮನ : ನಿಶ್ಯಕ್ತಿ, ನೆಗಡಿ
ನಿಶ್ಯಕ್ತಿಯಿಂದ ಬಳಲುವವರು, ಹೆಚ್ಚು ವ್ಯಾಯಾಮ ಮಾಡುವವರು ಎರಡು ಮೂರು ಚಮಚದಷ್ಟು ಕಡಲೇ ಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಒಣದ್ರಾಕ್ಷಿಯ ಜತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು. ನೆಗಡಿಯಿರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ.


ವಸ್ತು : ಹಲಸಿನ ಹಣ್ಣು
(ಜ್ಯಾಕ್ ಫ್ರೂಟ್)
ಶಮನ : ಪಿತ್ತ ವಿಕಾರ, ನರಗಳ ದೌರ್ಬಲ್ಯ.
ಹಲಸಿನ ಹಣ್ಣನ್ನು ಜೇನುತುಪ್ಪದೊಡನೆ ತಿನ್ನುತ್ತಾ ಬಂದರೆ ಪಿತ್ತವಿಕಾರಗಳು ಶಮನಗೊಳ್ಳುವುದು. ತೊಳೆಗಳನ್ನು ಸಣ್ಣದಾಗಿ ತುಂಡುಮಾಡಿ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚುವುದಲ್ಲದೇ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಹಲಸಿನ ಸೇವನೆಯಿಂದ ವೀರ್ಯ್ ವೃದ್ಧಿಯೂ ಆಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ.


ವಸ್ತು : ಸೀತಾಫಲ (ಕಸ್ಟರ್ಡ್ ಆಪಲ್)
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು.



ವಸ್ತು : ಹಾಗಲಕಾಯಿ
(ಬಿಟ್ಟರ್ ಗೌರ್ಡ್)
ಶಮನ : ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು.


ವಸ್ತು : ಅಂಜೂರ (ಫಿಗ್)
ಶಮನ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ.
ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.


ವಸ್ತು ಸೇಬು (ಆಪಲ್)
ಶಮನ : ತಲೆನೋವು, ಮರೆವು, ಮೊಡವೆ.
ಸೇಬಿನ ಹಣ್ಣನ್ನು ತುಂಡುಮಾಡಿಕೊಂಡು ಉಪ್ಪು ಸಹಿತ ನಿರಂತರ ಸೇವಿಸಿದರೆ ತಲೆನೋವು ಕಡಿಮೆಯಾಗುವುದು. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುವುದು. ಊಟವಾದ ಬಳಿಕ ಸೇಬನ್ನು ತಿಂದರೆ ಜ್ನಾಪಕ ಶಕ್ತಿ ಹೆಚ್ಚುವುದು.


ವಸ್ತು : ಪರಂಗಿ ಹಣ್ಣು
(ಪಪಾಯ)
ಶಮನ : ಹೃದಯ ದೌರ್ಬಲ್ಯ
ಪರಂಗಿಹಣ್ಣಿನ ಜತೆ ಹಾಲು ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಹೃದಯ ದೌರ್ಬಲ್ಯ ನಿವಾರಣೆಯಾಗಿ ಹೊಸ ಚೈತನ್ಯ ಮೂಡುವುದು. ಹಾಲುಣಿಸುವ ತಾಯಂದಿರು ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಶಕ್ತಿ ಹೆಚ್ಚುವುದು. ಊಟದ ನಂತರ ಹಣ್ಣನ್ನು ಸೇವಿಸುತ್ತಾ ಬಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.


ವಸ್ತು : ಕಡಲೇಕಾಯಿ
ಉಪಯೋಗ : ಮುಖದ ಕಾಂತಿ ಹೆಚ್ಚಳ, ಮಧುಮೇಹಿಗಳಿಗೆ ಅನುಕೂಲ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.


ವಸ್ತು : ಮಾವು (ಮ್ಯಾಂಗೊ)
ಶಮನ : ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ.
ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. ಹಣ್ಣನ್ನು ಹಿತಮಿತವಾಗಿ ತಿಂದರೆ ವಾಯು ಶಮನಗೊಳ್ಳುವುದು. ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಹಿತವಾಗುವುದು. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು.


ವಸ್ತು : ಅಡುಗೆ ಉಪ್ಪು
ಶಮನ : ಬಾಯಿ ಹುಣ್ನು
ಒಂದು ಬಟ್ಟಲು ಬಿಸಿನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸುವುದು. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು.


ವಸ್ತು : ಮೆಣಸು
ಶಮನ : ಹಲ್ಲುನೋವು
ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು. ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುವುದು.


ವಸ್ತು : ಕಿತ್ತಳೆ
ಶಮನ : ಮುಖದಲ್ಲಿ ಕಲೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖದಲ್ಲಿ ಕಲೆಯಿರುವ ಭಾಗದಲ್ಲಿ ಮೃದುವಾಗಿ ತಿಕ್ಕಬೇಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮುಖದಲ್ಲಿನ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಗುವುವು.


ವಸ್ತು : ಕೊತ್ತಂಬರಿ
ಶಮನ : ತಲೆನೋವು, ಬಾಯಿಯ ದುರ್ಗಂಧ.
ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ. ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.


ವಸ್ತು : ಉದ್ದು
ಶಮನ : ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ.
ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು.


ವಸ್ತು : ನಿಂಬೆ
ಶಮನ : ಸೊಳ್ಳೆಗಳ ಕಾಟ, ಬಾಯಿಯ ದುರ್ವಾಸನೆ.
ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವ ಜನರು ಮೈಕೈಗೆ ನಿಂಬೆರಸ ಸವರಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನಿವಾರಣೆಯಾಗುವುದು.


ವಸ್ತು : ಲವಂಗ
ಶಮನ : ಹಲ್ಲು ನೋವು, ಕೆಮ್ಮು.
ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಸಾಧಾರಣ ಕೆಮ್ಮು ಕಾಣಿಸಿಕೊಂಡಾಗ ಕಲ್ಲುಸಕ್ಕರೆ ಮತ್ತು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಶಮನವಾಗುವುದು.





ವಸ್ತು : ತುಳಸಿ
ಶಮನ : ಮೈಕೈನೋವು
ಒಂದು ಲೋಟ ನೀರಿನಲ್ಲಿ ಹತ್ತು ತುಲಸಿ ಎಲೆಗಳನ್ನು ಚೆನ್ನಾಗಿ ಕುದಿಸುವುದು. ನೀರು ಚೆನ್ನಾಗಿ ಕುದಿದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳುವುದು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವುದು. ಮೈಕೈನೋವು ನಿಲ್ಲುವವರೆಗೂ ಪ್ರತಿದಿನ ಈ ಕಷಾಯ ಬಳಸುವುದು. ಜತೆಗೆ, ಅರ್ಧ ಗ್ರಾಂ ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಬೇಗ ಶಮನವಾಗುವುದು.


ವಸ್ತು : ಮಾವಿನ ಎಲೆಗಳು
ಶಮನ : ಕಿವಿ ಸೋಂಕು
ಕೆಲವು ತಾಜಾ ಮಾವಿನ ಎಲೆಗಳನ್ನು ಚೆನ್ನಾಗಿ ಅರೆದು ಅವುಗಳಿಂದ ಒಂದು ಟೀ ಚಮಚ ರಸವನ್ನು ತಯಾರಿಸಿಕೊಳ್ಳುವುದು. ಈ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೋಂಕಿಗೆ ಒಳಗಾಗಿರುವ ಕಿವಿಗೆ ಔಷಧವಾಗಿ ಬಳಸಬಹುದು. ದಿನಕ್ಕೆರಡು ಬಾರಿ ಪ್ರತಿಸಲವೂ ಒಂದೆರಡು ಹನಿ ಬಳಸಿದರೆ ಸೋಂಕು ನಿವಾರಣೆಯಾಗುವುದು.


ವಸ್ತು : ಖರ್ಜೂರ
ಶಮನ : ಜಂತುಹುಳು, ಭೇದಿ.
ಜಂತುಹುಳುಗಳಿಂದ ಬಳಲುತ್ತಿರುವವರು ಐದು ಖರ್ಜೂರ ತಿಂದು ನಿಂಬೆಹಣ್ಣಿನ ಪಾನೀಯ ಕುಡಿದರೆ ಶಮನವಾಗುವುದು. ಪರಿಣಾಮ ಬೀರುವವರೆಗೂ ಮುಂದುವರಿಸುವುದು ಒಳ್ಳೆಯದು. ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು.


ವಸ್ತು : ಉದ್ದು
ಶಮನ : ಸ್ತ್ರೀಯರ ಬಿಳುಪು ರೋಗ.
ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಸ್ತ್ರೀಯರ ಬಿಳುಪುರೋಗ ವಾಸಿಯಾಗುತ್ತದೆ.


ವಸ್ತು : ಬಿಲ್ವ
ಶಮನ : ಕಫ, ಊತ.
ಕಫ ಕಟ್ಟಿಕೊಂಡು ಎದೆ ನೋವು ಬರುತ್ತಿದ್ದರೆ ಬಿಲ್ವದ ಎಲೆಗಳ ರಸವನ್ನು ಕುಡಿದರೆ ಶಮನವಾಗುವುದು. ಊತವಿರುವಾಗ ಎಲೆಗಳನ್ನು ಬಿಸಿ ಮಾಡಿ ಪಟ್ಟು ಹಾಕಿದರೆ ಪರಿಣಾಮ ಬೀರುವುದು.


ವಸ್ತು : ವೀಳ್ಯದೆಲೆ
ಶಮನ : ಕೆಮ್ಮು, ನೋವು.
ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.





ವಸ್ತು : ಅರಿಶಿನ
ಶಮನ : ರಕ್ತ ಸ್ರಾವ, ಮೊಡವೆ.
ದೇಹದ ಯಾವುದೇ ಭಾಗ ಕೊಯ್ದುಕೊಂಡು ರಕ್ತ ಒಸರುತ್ತಿದ್ದರೆ, ಆ ಗಾಯದ ಮೇಲೆ ಅರಿಶಿನ ಹುಡಿಯನ್ನು ಉದುರಿಸಿದರೆ ರಕ್ತ ಬರುವುದು ನಿಲ್ಲುವುದು. ಮೊಡವೆಗಳಿಗೆ ಅರಿಶಿನದ ಕೊರಡನ್ನು ತೇಯ್ದು ಲೇಪಿಸುವುದರಿಂದ ಅವುಗಳು ಕ್ರಮೇಣ ಕಡಿಮೆಯಾಗುತ್ತವೆ.


ವಸ್ತು : ತುಳಸಿ
ಶಮನ : ಹುಳುಕಡ್ಡಿ.
ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಶೀಘ್ರ ಗುಣ ಕಂಡುಬರುವುದು.





ವಸ್ತು : ಶ್ರೀಗಂಧ
ಶಮನ : ಚರ್ಮದ ಅಲರ್ಜಿ.
ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರ್‍ಈಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರ್‍ಈಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.


ವಸ್ತು : ಪರಂಗಿಹಣ್ಣು
ಉಪಯೋಗ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ.
ಪ್ರತಿದಿನ ಪರಂಗಿಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಹಣ್ಣು ಸೇವಿಸಿದರೆ ಪರಿಣಾಮ ಬೀರುವುದು. ಬಾಣಂತಿಯರು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುವುದು.

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಆಹಾರದಲ್ಲಿ ನಾರಿನ ಅಂಶ ಇಲ್ಲದಿರುವುದೇ ಮಲಬದ್ಧತೆ ಉಂಟಾಗಲು ಮುಖ್ಯ ಕಾರಣ. ನಾರಿನಂಶವಿರುವ ಆಹಾರ ಸೇವನೆ ಮಾಡುತ್ತಿದ್ದರೆ ಸಾಮಾನ್ಯವಾಗಿ ಎಂದೂ ಮಲಬದ್ಧತೆ ಆಗುವುದಿಲ್ಲ.

ನಾರು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆದರೆ ಈ ನಾರು ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೀರಿಕೊಂಡು ಗಾತ್ರಧಲ್ಲಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೊಡ್ಡ ಕರುಳಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯ ಸಂಖ್ಯೆ ಹೆಚ್ಚುತ್ತದೆ. ಈ ಉಪಯುಕ್ತ ಬ್ಯಾಕ್ಟೀರಿಯ ನಮ್ಮ ಕರುಳಿನಲ್ಲಿಯ ನೈಟ್ರೋಜೆನ್, ಗ್ಲೂಕೋಸ್, ಕೊಲೆಸ್ಟರಾಲ್ ಉಪಯೋಗಿಸಿ ವೃದ್ಧಿಹೊಂದುತ್ತವೆ. ಆದ್ದರಿಂದ ಈ ನಾರು ಮಲಬದ್ದತೆ ತಡೆಯುವುದಲ್ಲದೆ ಸಕ್ಕರೆ ಕಾಯಿಲೆ ಉಳ್ಳವರಿಗೆ, ಬೊಜ್ಜು ಇರುವ ವ್ಯಕ್ತಿಗಳಿಗೆ, ಪಿತ್ತಕೋಶದಲ್ಲಿ ಕಲ್ಲು ಇರುವವರಿಗೆ, ಹೃದಯ ರೋಗಿಗಳಿಗೆ ಪ್ರಯೋಜಕವಾಗುತ್ತವೆ.

ಪಾಶ್ಚಿಮಾತ್ಯ ಜನರು ಕಡಿಮೆ ಪ್ರಮಾಣದ ನಾರು ಸೇವಿಸುವುದರಿಂದ (೨೦ ಗ್ರಾಮ್) ಅವರಲ್ಲಿ ಅನೇಕ ರೋಗಗಳು ಉದಾ: ಕರುಳಿನ ಕ್ಯಾನ್ಸರ್, ಪಿತ್ತಕೋಶದ ಕಲ್ಲುಗಳು ಹೆಚ್ಚಾಗುತ್ತವೆ.

ಆಫ್ರಿಕಾದಲ್ಲಿ ಜನರು ಸರಾಸರಿ ೧೫೦ ಗ್ರಾಮ್ ನಷ್ಟು ನಾರು ಪದಾರ್ಥ ಸೇವಿಸುವುದರಿಂದ ಅಲ್ಲಿಯ ಜನರಿಗೆ ಈ ತೊಂದರೆಗಳು ಅಷ್ಟೇನು ಕಂಡುಬರುವುದಿಲ್ಲ. ದಿನಕ್ಕೆ ಸರಾಸರಿ ೫೦ ಗ್ರಾಮ್ ನಾರು ಉಪಯೋಗಿಸಿದರೂ ಸಾಕು, ಬಿಗಿ ಹೊಟ್ಟೆ ಸಡಿಲವಾಗುತ್ತದೆ, ಜತೆಗೆ ಇತರ ರೋಗಗಳನ್ನೂ ತಡೆಗಟ್ಟಬಹುದಾಗಿದೆ.

ಔಷಧಗಳಿಗೆ ಶರಣು ಹೋಗುವುದು ಒಳ್ಳೆಯದಲ್ಲ. ಅವು ಅಭ್ಯಾಸ ಅಥವಾ ಚಟ ಉಂಟು ಮಾಡುತ್ತವೆ ಹಾಗೂ ಮಲಬದ್ಡತೆ ಗುಣ ಹೊಂದುವುದಿಲ್ಲ. ನಾರಿನಂಶ ಇರುವ ಆಹಾರ ಪದಾರ್ಥಗಳೆಂದರೆ - ಸೊಪ್ಪು, ಬೀಟ್ ರೂಟ್, ಕ್ಯಾಬೇಜ್, ಆಲೂಗೆಡ್ಡೆ, ಕೆಂಪು ಅಕ್ಕಿ, ರಾಗಿ, ಜೋಳ, ನವಣೆ, ಸಜ್ಜೆ, ತೊಗರೆ, ಹೆಸರು, ಉದ್ದು, ಅಂಟು, ಸೇಬು, ಬಾಳೆಹಣ್ಣು, ದ್ರಾಕ್ಷಿ ಇತ್ಯಾದಿ. ಮೇಲೆ ಹೇಳಿದ ಕೆಲವು ಪದಾರ್ಥಗಳಲ್ಲಿ ಅಂದರೆ ಜೋಳ, ನವಣೆ, ಸಜ್ಜೆ, ಉದ್ದು, ಬಾಳೇಹಣ್ಣು ಕೆಲವರಿಗೆ ಆಗದೇ ಇರಬಹುದು. ಅಂಥಹವರು ಕೆಂಪು ಅಕ್ಕಿಯನ್ನು ಉಪಯೋಗಿಸಿದರೆ ಬಹಳ ಅನುಕೂಲವಾಗುತ್ತದೆ.

ರಾಗಿ ಅಭ್ಯಾಸ ಇರುವವರಿಗೆ ಏನೂ ತೊಂದರೆ ಇರುವುದಿಲ್ಲ. ಪಾಲೀಶ್ ಮಾಡಿದ ಅಕ್ಕಿ, ಬೇಕರಿ ತಿಂಡಿಗಳು, ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಇತ್ಯಾಧಿಗಳನ್ನು ಉಪಯೋಗಿಸುವವರು ಮಲಬದ್ದತೆಗೆ ಸುಲಭವಾಗಿ ತುತ್ತಾಗುವರು. ಆದ್ದರಿಂದ ಹೇರಳವಾಗಿ ಹೊಟ್ಟು ಇರುವ(ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಕೆಂಪು ಅಕ್ಕಿಯನ್ನು ನಿಮ್ಮ ಊಟದಲ್ಲಿ ಪ್ರತಿದಿನವೂ ಊಟಮಾಡುತ್ತಿದ್ದರೆ ಮಲಬದ್ದತೆಯ ತೊಂದರೆಗಳೇ ಇರುವುದಿಲ್ಲ.

ಹೆಚ್.ಕೆ.ಸತ್ಯಪ್ರಕಾಶ್.
ಕೃಪೆ : ಪ್ರಜಾವಾಣಿ ೯೮೮೬೩ ೩೪೬೬೭
ಡಾ. ಸಿ. ಪ್ರಕಾಶ್ ರಾವ್.

ಆಹಾರದಲ್ಲಿನ ಸತ್ವ

ಆಹಾರದಲ್ಲಿನ ಸತ್ವ

ಪ್ರಕೃತಿ : ಏನಯ್ಯಾ ನಿಮ್ಮನೇಲಿ ಎಲ್ಲ ೧೪
ಜನಾನು ಒಂದಲ್ಲ ಒಂದು ಕಾಯಿಲೆಯಿಂದ ನರಳುತ್ತಿದ್ದಾರಲ್ಲ, ಡಾಕ್ಟರಿಗೆ ತೋರಿಸ್ಲಿಲ್ವಾ?

ಮನುಷ್ಯ : ಅಯ್ಯೋ, ಡಾಕ್ಟರುಗಳಿಗೆ ತೋರ್‍ಸಿ ತೋರ್‍ಸಿ ಸಾಕಾಗಿದೆ, ಪ್ರಕೃತಿ. ಯಾವ ಡಾಕ್ಟರರ ಹತ್ರ ಹೋದ್ರೂ ಒಂದೇ ಕತೆ, ಔಷಧಿ ಕೊಡ್ಸಿ ಕೊಡ್ಸಿ ಸಾಕಾಗಿದೆ. ಹಾವು ಸಾಯೋಲ್ಲ, ಕೋಲು ಮುರಿಯೋಲ್ಲ ಅನ್ನೋ ಹಾಗಾಗಿದೆ ನಮ್ಮ ಪರಿಸ್ಥಿತಿ. ಬೇಜಾರಾಗೋಗಿದೆ.
ಔಷಧಿಗಳು ಕೆಲಸವೇ ಮಾಡ್ತಾಇಲ್ವೇನೋ ಅನ್ನಸ್ತಾ ಇದೆ. ಒಂದು ಔಷಧಿ ಕೊಟ್ರೆ ಇನ್ನೊಂದು ಕಾಯಿಲೆ ಶುರುವಾಗುತ್ತೆ. ಶುರುವಿನಲ್ಲಿ ಒಂದೇ ಒಂದು ಕಾಯಿಲೆ ಇತ್ತು. ಅದಕ್ಕೆ ಔಷಧಿ ಕೊಡಿಸೋಕ್ಕೆ ಹೋಗಿ ಈಗ ನೂರೆಂಟು ಕಾಯಿಲೆ ಅಂಟಿಕೊಂಡುಬಿಟ್ಟಿದೆ. ಈಗ ಬೆಳಿಗ್ಗೆಯಿಂದ ರಾತ್ರಿ ಮಲಗೋವರೆಗೂ ೧ ಕೇಜಿ ಔಷಧಿ ತಿನ್ನೋದೆ ಆಗ್ತಿದೆ. ಆಹಾರಕ್ಕಿಂತ ಔಷಧಿಗಳೇ ಜಾಸ್ತಿ ಆಗೋಗಿದೆ. ಏನು ಮಾಡಬೇಕೋ ದಿಕ್ಕೇ ತೋಚ್ತಾ ಇಲ್ಲ. ನೀನಾದ್ರೂ ದಾರಿ ತೋರ್‍ಸಯ್ಯಾ, ಪ್ರಕೃತಿ ದೇವರೇ. ನಿನಗೆ ಪುಣ್ಯ ಬರುತ್ತೆ.

ಪ್ರಕೃತಿ : ಅಲ್ಲಾಯ್ಯ, ನೀನು ಪ್ರಜಾವಾಣಿ, ವಿಜಯಕರ್ನಾಟಕ ಪೇಪರ್ ಗಳನ್ನ ಓದ್ತಾಇದೀಯ? ಅದರಲ್ಲಿ ಎರಡು ವರ್ಷದಿಂದ ಪ್ರತಿಯೊಬ್ಬರೂ ಆರೋಗ್ಯವನ್ನು ಹೇಗೆ ಕಾಪಾಡ್ಕೋಬೇಕು ಅಂತ ಬರೀತಾ ಇದಾರಲ್ಲ, ಅದನ್ನು ಓದಿದೀಯ? ಔಷಧಿಗಳ ಗೋಜೇ ಇಲ್ಲದೆ ಎಲ್ಲ ಕಾಯಿಲೆಗಳನ್ನು ನಾವು ಉಪಯೋಗಿಸುವ ಆಹಾರಗಳಲ್ಲೇ ಸರಿಮಾಡಬಹುದು ಎಂದು ಬರೀತಿದಾರಲ್ಲ! ಹಿಂದೆ ಯಾರೂ ಯಾವ ಪೇಪರ್‍ನೋರೂ ಹೀಗೆ ಜನಗಳಿಗೆ ಎಚ್ಚರಿಕೆ ಕೊಡ್ತಾಇರ್‍ಲಿಲ್ಲ. ಈಚೆಗೆ ಎಲ್ಲ ಪೇಪರ್‍ನೋರೂ ಜನಗಳಿಗೆ ತಿಳಿಸಿಕೊಡ್ತಾ ಇದಾರೆ.

ಮನುಷ್ಯ : ಏನಂತ ಇದೆ ಅದರಲ್ಲಿ! ಅಂಥಾ ವಿಶೇಷ ಏನು? ನಮ್ಮ ಆಹಾರದಲ್ಲೇ ಕಾಯಿಲೆ ವಾಸಿಮಾಡಬಹುದು ಅಂತ ಮತ್ತು ಅದು ಹೇಗೆ ಸಾಧ್ಯ ಡಾಕ್ಟರು ಗಳಿಗೆ ವಾಸಿಮಾಡೋಕೆ ಆಗದೇ ಇರುವುದು ಬರೀ ಆಹಾರದಲ್ಲೇ ಹೇಗೆ ವಾಸಿಯಾಗುತ್ತದೆ!

ಪ್ರಕೃತಿ : ಅಯ್ಯಾ, ಪೆದ್ದಪ್ಪ, ಈ ಇಡೀ ಜಗತ್ತಿನಲ್ಲಿ ಇರುವ ಕಾಯಿಲೆಗಳನ್ನೆಲ್ಲಾ ನಮ್ಮ ಆಹಾರಗಳಲ್ಲೇ ೧೦೦ ಕ್ಕೆ ೧೦೦ ರಷ್ಟು ವಾಸಿಮಾಡಬಹುದು ಕಣಯ್ಯಾ. ಅದೂ ಅಲ್ಲದೇ ಈಗ ನರಳುತ್ತಿರುವ ಕಾಯಿಲೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿ ಇನ್ನು ಮುಂದೆಯೂ ಯಾವ ಕಾಯಿಲೆಯೂ ಬರದಂತೆ ನೋಡಿಕೊಳ್ಳಬಹುದು ಕಣಯ್ಯಾ.

ಮನುಷ್ಯ : ಅದು ಹೇಗೆ ನನಗೂ ತಿಳಿಸಿಕೊಡಯ್ಯಾ.

ಪ್ರಕೃತಿ : ಹಿಂದಿನ ಕಾಲದಲ್ಲಿ ಕೆಂಪು ಅಕ್ಕಿ ಅಂತ ಬೆಳೀತ ಇದ್ರು ಗೊತ್ತಾ? ಅಥವಾ ಕೊಟ್ಟಣದ ಅಕ್ಕಿ ಅಂತ ಕರೀತಾ ಇದ್ರು ಗೊತ್ತಾ? ಅದನ್ನ ತಿಂದು ಜನ ಎಷ್ಟು ಗಟ್ಟಿಮುಟ್ಟಾಗಿದ್ರು ಗೊತ್ತಾ? ಆಗೆಲ್ಲಾ ಈಗ ಬರುತ್ತಿರುವ ಕಾಯಿಲೆಗಳೆಲ್ಲ ಇತ್ತಾ? ಯೋಚನೆ ಮಾಡಿ ನೋಡು. ಇತ್ತೀಚಿನ ವರ್ಷಗಳಲ್ಲಿ ಪಾಲೀಶ್ ಮಾಡಿದ ಅಕ್ಕಿ ತಿಂದು ಈ ಕಾಯಿಲೆಗಳೆಲ್ಲ ಬಂದಿರುವುದು ಗೊತ್ತಾ? ಈ ಅಕ್ಕಿಯನ್ನು ಊಟಮಾಡುವವರಿಗೆ ಈ ಕಾಯಿಲೆಗಳೆಲ್ಲಾ ಸಾಮಾನ್ಯ. ಜೊತೆಗೆ ಈ ಅಕ್ಕಿಯನ್ನು ತಿನ್ನುವವರಿಗೆ ಆಸಿಡಿಟಿ, ಗ್ಯಾಸ್ಟ್ರ್‍ಐಟಿಸ್ ಎಂಬ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದಲೇ ಬೇರೆಲ್ಲ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ.

ಗುರುವಾರ, ಮಾರ್ಚ್ 27, 2008

ದಣಿದ ದೇಹಕ್ಕೆ ತಂಪನೆ ಪಾನೀಯ

ಸೌತೆಕಾಯಿ ಜ್ಯೂಸ್:-
ಸಾಮಗ್ರಿ: ಒಂದು ಮಂಗಳೂರು ಸೌತೇಕಾಯಿ, ಎರಡು ಲೋಟ ನೀರು, ಒಂದು ಅಚ್ಚು ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ।
ವಿಧಾನ: ಸೌತೇಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದೆಸೆದು ಉಳಿದ ಭಾಗವನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರೆ ಜ್ಯೂಸ್ ಸಿದ್ಧ।

ಬೀಟ್ ರೂಟ್ ಜ್ಯೂಸ್:-
ಸಾಮಗ್ರಿ: ಒಂದು ಬೀಟ್ ರೂಟ್, ಅರ್ಧ ಅಚ್ಚು ಬೆಲ್ಲ, ನೀರು, ಅರ್ಧ ಚಮಚ ಏಲಕ್ಕಿ ಪುಡಿ।
ವಿಧಾನ: ಸಿಪ್ಪೆ ತೆಗೆದ ಬೀಟ್ ರೂಟನ್ನು ಸಣ್ಣದಾಗಿ ಹೆಚ್ಚಿ, ನುಣ್ಣಗೆ ರುಬ್ಬಿ ಶೋಧಿಸಿ। ಈ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿದರೆ
ಜ್ಯೂಸ್ ಸಿದ್ಧ.

ಶನಿವಾರ, ಫೆಬ್ರವರಿ 2, 2008

ಧನ, ಮಧ್ಯ ಮತ್ತು ರುಣಾತ್ಮಕ ಆಹಾರ

ಧನಾತ್ಮಕ ಆಹಾರ
ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್)
೧. ಹಣ್ಣುಗಳು
೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.
(ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.
(ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ

೨. ತರಕಾರಿಗಳು
(ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.
(ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.
(ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.

೩. ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ.
೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.
೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.

ಮಧ್ಯಸ್ಥ ಆಹಾರ

ಮಧ್ಯಸ್ಠ,ನಿಗದಿತ ಸತ್ವ, ಮಧ್ಯಮಾನ್ನ, ರಾಜಸ(ಸೆಕೆಂಡರಿ,ನೂಟ್ರಲ್)
೧. ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.
೨. ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ ಇತ್ಯಾದಿ.
೩. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
೪. ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು.
೫. ಬೆಲ್ಲ, ವೀಳೇದೆಲೆ.
೬. ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.
೭. ಹಬೆಯಲ್ಲಿ ಬೇಯಿಸಿದ ಆಹಾರ, ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್) ಇತ್ಯಾದಿ.
೮. ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಇತ್ಯಾದಿಗಳು.
೯. ಗಾಣದಿಂದ ತೆಗೆದ ಎಣ್ಣೆ.

ಋಣಾತ್ಮಕ ಆಹಾರ

ಋಣಾತ್ಮಕ, ನಿಸ್ಸತ್ವ, ಮೃತಾನ್ನ, ತಾಮಸ(ನೆಗೆಟೀವ್)
೧. ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ
೨. ಮಾಂಸ, ಮೊಟ್ಟೆ ಇತ್ಯಾದಿ.
೩. ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ.
೪. ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು.
೫. ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು.
೬. ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು.
೭. ಹುರಿದ, ಕರಿದ ತಿಂಡಿಗಳು.
೮. ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು.
೯. ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು.
೧೦. ರೀಫೈನ್ ಮಾಡಿದ ಎಣ್ಣೆ, ಡಾಲ್ಡ.
೧೧. ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ.
೧೨. ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ.
೧೩. ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.

ಕೃಪೆ : ಮನುಜಾ! ಏನು ನಿನ್ನ ಆಹಾರ? ಎಂಬ ಪುಸ್ತಕದಿಂದ
ಬರೆದವರು : ತುಮಕೂರಿನ ಜಿ.ವಿ.ವಿ.ಶಾಸ್ತ್ರಿ
ಸಂಗ್ರಹಿಸಿದವರು : ೧) ಎಲ್. ಅರುಣ್
೯೮೮೬೪ ೧೭೨೫೨
ಈಮೈಲ್ : ಪರಿಸರ್ಪ್ರೇಮಿ ಅಟ್ ಯಾಹೂ.ಕಾಮ್
೨) ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಈಮೈಲ್ : ಎಸ್ಪಿ_೧೯೩೯ ಅಟ್ ಯಾಹೂ.ಕೊ.ಇನ್

ಯುವಕ ಯುವತಿಯರ ಆಹಾರ

ಯುವಕ ಯುವತಿಯರ ಆಹಾರ

'ಯುವಕಸ್ತಾವತ್ ಯುವತೀಸಕ್ತಃ'- ಯುವಕನ ಆಸಕ್ತಿ ಯುವತಿಯಲ್ಲಿ! ಯುವಕರಿಗೆ ಆಹಾರದ ವಿಷಯದಲ್ಲಿ ವಿಶೇಷ ಆಸಕ್ತಿಯಿರುವುದಿಲ್ಲ. ಹೋಟೆಲುಗಳು, ರಸ್ತೆಯ ಪಕ್ಕದ ಪಾನೀಪೂರಿ ಇತ್ಯಾದಿಗಳಲ್ಲಿ ಗಮನ ಹೆಚ್ಚು. ಕಾರಣ ಸ್ನೇಹಿತೆಯರೊಂದಿಗೆ ಸ್ವಚ್ಚಂದವಾಗಿ ತಿನ್ನಬಹುದಲ್ಲ. ಆದರೆ ಯುವತಿಯರೂ ಆ ರೀತಿಯೇ ತಿಂದರೂ ಸಹ ದಿನಕ್ಕೊಮ್ಮೆ ವಾರ್ ಡ್ರೋಬ್ ನ ಕನ್ನಡಿ ನೋಡಿಕೊಂಡು ದಪ್ಪಗಾದೆನೆಂದು ಕೊರಗುತ್ತಾರೆ! ಡಯಟ್ ಮಾಡಲು ಅನೇಕ ಸ್ತ್ರೀಯರ ಮ್ಯಾಗಝೀನ್ ಗಳು ಸಹಾಯಕ್ಕೆ ಬರುತ್ತವೆ.

ಮೊದಲ ಒಂದು ವಾರ ಡಯಟ್
ಮುಂದಿನ ವಾರ ಪೂರ್ಣ ಹೋಟೆಲ್ ವಿಸಿಟ್

ಹೀಗೆ ಮಾನಸಿಕವಾಗಿ ನರಳುವವರು ಕೆಲವರು. ನಿಜವಾಗಿ ಆಹಾರ ಬಿಟ್ಟು ನರಳುವವರು ಕೆಲವರು. ಈಚೆಗೆ 'ಫಿಗರ್' ಬಗ್ಗೆ ಕಾಳಜಿಯ ಹೆಣ್ಣುಮಕ್ಕಳು ಹೆಚ್ಚುತ್ತಿದ್ದಾರೆ. ಅವರು ಅನ್ನವೇ ತಮ್ಮ ಸಕಲ ದುಃಖಕ್ಕೂ ಕಾರಣವೆಂದು ಅನ್ನವನ್ನು ದ್ವೇಷಿಸಿ ತೃಪ್ತರಾಗುತ್ತಿದ್ದಾರೆ. ಆದರೆ ಅವರ ತೂಕವೇನು ಕಡಿಮೆಯಾಗುತ್ತಿಲ್ಲ. ಯುವಕರು ಈ ಬಗ್ಗೆ ಚಿಂತಿಸುವುದೇ ಇಲ್ಲ. ನಲವತ್ತರ ಮೇಲೆ ಹೊಟ್ಟೆ ಗಣಪನ ಹೊಟ್ಟೆಯೊಂದಿಗೆ ಸ್ಪರ್ಧಿಸಿ ಗೆದ್ದಮೇಲೆ ಡಾಕ್ಟರರ ಸಲಹೆಯಂತೆ ಡಯಟ್ ಮಾಡಲು ಒಲ್ಲದ ಮನಸ್ಸಿನಿಂದ ಪ್ರಾರಂಭ. ಇಬ್ಬರೂ ವೈಜ್ನಾನಿಕವಾಗಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರವರ ಎತ್ತರಿಕ್ಕಿರಬೇಕಾದ ತೂಕದ ಚಾರ್ಟ್, ಕ್ಯಾಲೋರಿ, ಡಯಟ್ ಯಾವುದೂ ಅವರ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆಲ್ಲಾ ಅವರು ತಿನ್ನುತ್ತಿರುವ ಸತ್ತ ಆಹಾರ(ಜಂಕ್ ಫುಡ್) ಕಾರಣ. ರಸ್ತೆಯ ಬದಿಯ ಆಹಾರ ಸೇವಿಸುವುದು ಆರೋಗ್ಯಕರವೇ? ಅವರಿಗೆ ಅದು ಗೊತ್ತಿಲ್ಲವೇ? ಎಲ್ಲವೂ ಗೊತ್ತಿದೆ. ಆದರೆ ಅನುಷ್ಠಾನದಲ್ಲಿಲ್ಲ. ಹೋಟೆಲ್ಗಳು, ಪಾನೀಪುರಿ ಅಂಗಡಿಗಳು, ನಾರ್ತ್ ಇಂಡಿಯನ್, ಚೈನೀ, ಬೇಕರಿಗಳು ಇತ್ಯಾದಿ ಹೊಸ ತರಹೆಯ ನಾನಾ ನಮೂನೆಯ ಆಕರ್ಷಣೀಯವಾದ ಆಹಾರದ ತಾಣಗಳು ಇಂದು ಹೆಚ್ಚು ಹೆಚ್ಚು ಯುವಕ ಯುವತಿಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.

ಮುಖ್ಯವಾದ ವಿಷಯ, ವ್ಯಾಯಾಮ ಹಾಗೂ ಸರಿಯಾದ ಆಹಾರವನ್ನು ಅವರು ಅಳವಡಿಸಿಕೊಳ್ಳಬೇಕು. ಯುವಕ ಯುವತಿಯರ ವಿಷಯದಲ್ಲಿ ಸರಿಯಾದ ಮೊದಲ ಆದ್ಯತೆಯ ಆಹಾರವೆಂದರೆ ಹಲ್ಲಿಗೆ ವ್ಯಾಯಾಮವನ್ನು ಒದಗಿಸುವ(ಚ್ಯೂಯಿಂಗ್ ಗಮ್ ಅಲ್ಲ) ಆಹಾರವೇ, ಮಿಕ್ಕ ಆಹಾರಗಳೆಲ್ಲವೂ ದ್ವಿತೀಯ ದರ್ಜೆಯ ಆಹಾರ. ಇಡ್ಲಿ, ದೋಸೆ, ಬಿಳಿಯ ಬ್ರೆಡ್ ಇತ್ಯಾದಿಗಳಿಗೆಲ್ಲಾ ಹಲ್ಲಿನ ಅವಶ್ಯಕತೆ ಇದೆಯೇ? ಇವಕ್ಕೇ ಈಗ ಪ್ರಥಮ ಸ್ಥಾನ. ಅದಕ್ಕೇ ಬೇಗ ಹಲ್ಲುಗಳನ್ನು ಕಳೆದುಕೊಳ್ಳುವಿಕೆ. ಮೇಲಿನ ಆಹಾರವನ್ನು ಹಲ್ಲು ಹೋದ ಮೇಲೆ ತಿನ್ನುವಿರಂತೆ. ಆದರೆ, ಮೊಳಕೇಕಾಳುಗಳನ್ನು ಅಗಿದು ತಿನ್ನುವ, ಸೀಬೆ, ಸೇಬು ಇತ್ಯಾದಿಗಳನ್ನು ಕಚ್ಚಿ ತಿನ್ನುವ, ಚಪಾತಿಯನ್ನು ಅಗಿಯುವ, ಕಬ್ಬನ್ನು ಸಿಗಿಯುವ ಆನಂದ, ಇದನ್ನೆಲ್ಲಾ ಯಾವಾಗ ಅನುಭವಿಸುತ್ತೀರಿ?

ಇದಕ್ಕೆಲ್ಲಾ ವೇಳೆಯಿಲ್ಲ! ಹಾಗಾದರೆ ವೇಳೆಯನ್ನು ಹೇಗೆ ಉಪಯೋಗಿಸುತ್ತೀರಿ? "ಓದಿಗೆ, ಆಟಕ್ಕೆ" "ಏನು ಆಟ ಆಡುತ್ತೀರ?" "ಇಲ್ಲ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತೇವೆ." ಸಾರ್ಥಕವಾಯಿತು!! ಆಟ ಆಡಲಿಕ್ಕೋ ಅಥವ ಬರೀ ನೋಡಲಿಕ್ಕೋ? ಇಂತಹ ಆಟ, ಅಂತಹ ಊಟದ ನಮ್ಮ ಭವ್ಯ ಭಾರತದ ಮುಂದಿನ ಪ್ರಜೆಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ!!

ಮೊದಲ ಸ್ಥಾನ ಮೊಳಕೆಯ ಕಾಳುಗಳು, ಕ್ಯಾರಟ್, ಬೀಟ್ ರೂಟ್ ಇತ್ಯಾದಿ ಹಸಿಯ ತರಕಾರಿಗಳು, ಸೇಬು, ಸೀಬೆ, ಹಲಸು ಇತ್ಯಾದಿ ಹಣ್ಣುಗಳು, ಕಬ್ಬು. ಬೇಯಿಸಿದ ಆಹಾರಕ್ಕೆ ಎರಡನೆಯ ಸ್ಥಾನ. ಅದರಲ್ಲೂ ಚಪಾತಿ, ರೊತ್ತಿ ಇತ್ಯಾದಿಗಳು ಮುಖ್ಯ. ಮೆತ್ತಗಿರುವ ಆಹಾರ ಹಲ್ಲು ಬಾರದ ಮಕ್ಕಳಿಗೂ ಅದಕ್ಕಿಂತ ಹೆಚ್ಚಾಗಿ ಮಿದುಕರಿಗೇ ಇರಲಿ ಬಿಡಿ! ಯುವಕರು ಹಲ್ಲಿಗೆ ಕೆಲಸ ಕೊಡದೆ ಆಹಾರ ಸೇವಿಸುವುದು ಮಹಾಪರಾಧ. ಹುಡುಗರಾಗಿದ್ದಾಗ ಮಾಡಿದ ತಪ್ಪಿನಿಂದ ಹಲ್ಲುಗಳು ಆಗಲೇ ಸಾಕಷ್ಟು ಹಾಳಾಗಿರುತ್ತವೆ.
ಈಗಲೂ ಮೃದುವಾದ ಆಹಾರ ಸೇವಿಸಿ ಬೇಗ ಹಲ್ಲುಗಳ ಗೋರಿಯನ್ನು ತೋಡುವುದೇ! ಅಗಿಯುವುದರ ಆನಂದ ಅಗಿದೇ ಅನುಭವಿಸಬೇಕು. ಬರೀ ಬರೆದು ಏನು ಪ್ರಯೋಜನ? ಯುವಕ, ಯುವತಿಯರು ದಪ್ಪ, ಸಣ್ಣ ಇತ್ಯಾದಿಗಳ ಬಗ್ಗೆ ವೃಥಾ ಚಿಂತಿಸದೆ ಹಲ್ಲನ್ನು ಉಪಯೋಗಿಸಿ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಿದರೆ ತನ್ನ ತಂದೆ, ತಾಯಿಯರಿಂದ ಪಡೆದ ಜೀನ್ ಗೆ ಅನುಗುಣವಾಗಿ ತೂಕ, ಎತ್ತರ ಎಲ್ಲವೂ ಸಹಜವಾಗಿ ಬರುತ್ತದೆ. ವಂಶವಾಹಿನಿಯಲ್ಲಿ ಬಾರದಿರುವುದನ್ನು ಯಾವ ಸಾಧನದಿಂದಲೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಆಹಾರ, ಉತ್ತಮ ವ್ಯಾಯಾಮ ನೀವು ಮಾಡಬೇಕಾದ ಜೀವವಿಮೆ. ಇದರ ಬಗ್ಗೆ ಚಿಂತಿಸಿ.

ಒಂದು ದಿನದ ಆಹಾರದ ಮಾದರಿ :
ಬೆಳಿಗ್ಗೆ : ೦೫-೦೦ ಒಂದು ಚೊಂಬು ನೀರು, (ನಂತರ ವ್ಯಾಯಾಮ, ಯೋಗಾಸನ, ಈಜು, ಓಟ, ಆಟ ಇತ್ಯಾದಿ)
೦೭-೦೦ ಬಿಸಿ ನೀರು + ಬೆಲ್ಲ + ನಿಂಬೆಹಣ್ಣು
೦೯-೦೦ ರೊಟ್ಟಿ, ಚಪಾತಿ(ಸೂಖ) ಇತ್ಯಾದಿ ೪೦% + ತರಕಾರಿಗಳ ಸಲಾಡ್ ೬೦%
ಮಧ್ಯಾನ್ಹ ೧೨-೦೦ ಹಿಟ್ಟು + ಬೇಯಿಸಿದ ತರಕಾರಿ + ಮಜ್ಜಿಗೆ + ಒಂದು ಹಸಿಯ ಕ್ಯಾರಟ್(ಈರುಳ್ಳಿ) ಕಡಿದು ತಿನ್ನಬೇಕು.
ಸಂಜೆ ೦೫-೦೦ ಬಾಳೆಯ ಹಣ್ಣು + ಋತುಮಾನದ ಹಣ್ಣು(ಬೇಕಿದ್ದಲ್ಲಿ).
ಆಟ-ಬೆವರು ಬೀಳುವಂತೆ)
ರಾತ್ರಿ ೦೮-೦೦ ಮೊಳಕೆಯ ಗೋಧಿ ೨ ಹಿಡಿ + ಬೆಂಡ ಖರ್ಜೂರ + ತೆಂಗಿನಕಾಯಿ + ೧ ಲೋಟ ಹಾಲು + ಹಣ್ಣುಗಳು, ಅಥವಾ ಮೊಳಕೆಯ ಹೆಸರುಕಾಳು(ಮೆಂಥ್ಯ, ಬಟಾಣಿ, ಕಡ್ಲೆ) + ತೆಂಗಿನ ತುರಿ + ತರಕಾರಿಯ ಸಲಾಡ್ = ಮಜ್ಜಿಗೆ.