ಬುಧವಾರ, ಸೆಪ್ಟೆಂಬರ್ 7, 2011

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ?

ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ. ಒಡೆದ ಹಿಮ್ಮಡಿಗೆ ಸಲಹೆಗಳು: 1. ಪ್ಯೂಮಿಕ್ ಸ್ಟೋನ್: ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯೂಮಿಕ್ ಸ್ಟೋನ್ ನಿಂದ ಒಣಗಿದ ನಿಮ್ಮ ಹಿಮ್ಮಡಿಗಳನ್ನು ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿಕೊಂಡರೆ ನಿರ್ಜೀವ ಕಣಗಳು ತೊಲಗಿ ಪಾದಗಳು ನುಣುಪಾಗುತ್ತದೆ. 2. ಮಾಯಿಶ್ಚರೈಸರ್: ಚರ್ಮ ಒಣಗಲು ಬಿಡದೆ ಪಾದಕ್ಕೆ ಮಾಯಿಶ್ಚರೈಸರನ್ನು ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಬಾಡಿ ಲೋಶನ್ ಅಥವಾ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಪಾದ ಕೋಮಲವಾಗಿರುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಉತ್ತಮ. 3. ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ನಿಂಬೆ ರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ, ನಿಂಬೆ ಕೊಳೆಯನ್ನು ತೊಲಗಿಸುತ್ತದೆ. ಪ್ಯೂಮಿಕ್ ಸ್ಟೋನ್ ನಿಂದ ಮೃದುವಾಗಿ ಉಜ್ಜಿದರೆ ಸ್ವಚ್ಛ ಪಾದ ನಿಮ್ಮದಾಗುತ್ತೆ. 4. ರೊಸ್ ವಾಟರ್: ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಅದನ್ನು ಹತ್ತಿಯಿಂದ ಹಚ್ಚಿಕೊಳ್ಳಬೇಕು. ಸುಮಾರು 15 ದಿನ ಈ ನಿಯಮ ಪಾಲಿಸಿದರೆ ಒಡೆದ ಹಿಮ್ಮಡಿ ಬೇಗ ಗುಣಹೊಂದುತ್ತದೆ. 5. ಶೂ ಧರಿಸಿ: ನಿಮ್ಮ ಪಾದಗಳಲ್ಲಿ ತೇವಾಂಶವಿರುವಂತೆ ನೋಡಿಕೊಂಡು ಹಿಮ್ಮಡಿ ಒಡೆಯದಂತಿರಲು ಶೂ ಧರಿಸಿದರೆ ತುಂಬಾ ಉಪಯುಕ್ತ. 6. ನೀರು ಕುಡಿಯಿರಿ: ತುಂಬಾ ಚೆನ್ನಾಗಿ ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡುತ್ತದೆ. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ. 7. ಬಾಳೆಯೊಂದಿಗೆ ಗ್ಲಿಸರಿನ್: ಚೆನ್ನಾಗಿ ಕಳಿತ ಬಾಳೆ ಹಣ್ಣಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಮಿರುಗುತ್ತದೆ. Topics: ಆರೋಗ್ಯ, ಕಾಲು, heel, foot, health English summary Cracked heels can be a major skin problem if not treated well. The deeper the cracks; the longer it will take to get healed so keep the feet moisturized specially in the winter time. Apart from applying moisturizer before going to bed here are tips to cure cracked heels. Take a look.

ಮಂಗಳವಾರ, ಏಪ್ರಿಲ್ 6, 2010

ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ?

ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?






ನಿಮ್ಮ ದೇಹದ ಒಳಗಡೆ ಏನಿದೆ ನೋಡಿದ್ದೀರಾ? ನಿಮ್ಮ ದೇಹದ ಒಳಗೆ ಎಷ್ಟು ಕೊಳಕು ತುಂಬಿದೆ ಅನ್ನೋದು ಗೊತ್ತಾ?
ನೀವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿ, ಉಜ್ಜಿ ಉಜ್ಜುತ್ತೀರಾ. ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡುತ್ತೀರ, ದೇಹದ ಹೊರಗೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ, ಅಲ್ಲವೇ? ಹಾಗೆಯೇ ನಿಮ್ಮ ದೇಹದ ಒಳಗೂ ಚೆನ್ನಾಗಿರುವಂತೆ ನೋಡಿಕೊಳ್ಳಬೇಕಲ್ಲವೇ? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಬರೆಯುತ್ತೇನೆ ಹಾಗು ನಿಮ್ಮ ದೊಡ್ಡ ಕರುಳಿನ ಒಳಗೆ ಎಷ್ಟೆಲ್ಲಾ ಪಾಚಿ ಕಟ್ಟಿಕೊಂಡಿದೆ ಎಂಬ ಚಿತ್ರಗಳನ್ನೂ ಇಲ್ಲಿ ಅಂಟಿಸುತ್ತೇನೆ.
ನೀವು ನಿಮ್ಮ ದೇಹವನ್ನು ಯಾವುದೇ ರೋಗ ಬರದಂತೆ ನೋಡಿಕೊಳ್ಳಬೇಕಾದರೆ ಅಥವಾ ರೋಗ ಬಂದಮೇಲೆ ಸರಿಪಡಿಸಿಕೊಳ್ಳಬೇಕಾದರೆ ಈ ಕೆಳಕಂಡ ಬ್ರಾನ್ ಗಳನ್ನು ನಿಮ್ಮ ನಿತ್ಯ ಊಟಗಳಲ್ಲಿ ಉಪಯೋಗಿಸುತ್ತಲೇ ಇದ್ದರೆ ಎಲ್ಲ ತರಹ ರೋಗಗಳು ಮಂಗಮಾಯವಾಗುತ್ತವೆ.
ಓಟ್ ಬ್ರಾನ್, ಗೋಧಿ ಬ್ರಾನ್, ರೈಸ್ ಬ್ರಾನ್, ಓಟ್ ಮೀಲ್ಸ್, ಬಾರ್ಲಿ ಬ್ರಾನ್, ಇತ್ಯಾದಿ ಉಪಯೋಗಿಸುತ್ತಲೇ ಇರಬೇಕು. ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ತಿನ್ನುವವರು, ಜಂಕ್ ತಿಂಡಿಗಳನ್ನು ತಿನ್ನುವವರು, ಮೈದಾದಲ್ಲಿ ಮಾಡಿರುವ ತಿಂಡಿಗಳನ್ನು ತಿನ್ನುವವರು, ಕುರುಕು ತಿಂಡಿಗಳನ್ನು ತಿನ್ನುವವರು ಈ ಮೇಲೆ ಹೇಳಿದ ಬ್ರಾನ್ ಗಳನ್ನು ದಿನ ನಿತ್ಯ ಉಪಯೋಗಿಸುತ್ತಿದ್ದರೆ ಅನುಕೂಲವಾಗುತ್ತದೆ. ಆದರೆ ಪ್ರತಿದಿನವೂ ಈ ಮೇಲಿನ ತಿಂಡಿಗಳನ್ನು ತಿಂದು ಬ್ರಾನ್ ಉಪಯೋಗಿಸುತ್ತಿದ್ದರೂ ಸಹಾ ಏನೂ ಪ್ರಯೋಜನ ಆಗುವುದಿಲ್ಲ. ಇದಲ್ಲದೆ ವಾತಾವರಣದಿಂದ, ಹೊರಗಿನ ಕೆಮಿಕಲ್ ಹೊಗೆಗಳಿಂದಲೂ ಈ ಕೆಟ್ಟ ಪಾಚಿಗಳೂ ನಮ್ಮ ಕರುಳಿನಲ್ಲಿ ಶೇಖರವಾಗಿ ತುಂಬಾ ತೊಂದರೆ ಅನುಭವಿಸಬೇಕಾಗಿ ಬರುತ್ತದೆ.

ಬುಧವಾರ, ಸೆಪ್ಟೆಂಬರ್ 17, 2008

ಮನೆಯಲ್ಲೇ ಮೊಡವೆಗಳಿಗೆ ಔಷಧಿ

೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.

ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.

ಶುಕ್ರವಾರ, ಸೆಪ್ಟೆಂಬರ್ 12, 2008

ನಿಮ್ಮ ಆರೋಗ್ಯ ಬಹಳ ಮುಖ್ಯ

ನಿಮ್ಮ ಆರೋಗ್ಯವನ್ನು ದಯವಿಟ್ಟು ಕಾಪಾಡಿಕೊಳ್ಳಿ. ಆರೋಗ್ಯವನ್ನು ಕೆಡಿಸಿಕೊಂಡು ಆಮೇಲೆ ಪರದಾಡಬೇಡಿ.
ಯಾವಾಗಲೂ ನಿಮ್ಮ ಊಟಕ್ಕೆ ಪಾಲೀಶ್ ಮಾಡದೇ ಇರುವ ಕೆಂಪು ಕಜ್ಜಾಯ ಅಕ್ಕಿಯನ್ನೇ ಉಪಯೋಗಿಸಿರಿ. ನಿಮಗೆ ಒಂದು ಪಕ್ಷ ಕಜ್ಜಾಯ ಅಕ್ಕಿ ಸಿಗದಿದ್ದಲ್ಲಿ ಮಾಮೂಲಿ ಅಕ್ಕಿಯನ್ನೇ ಊಟ ಮಾಡಿ. ಎರಡು ಮೂರು ದಿನಕ್ಕೆ ಒಂದು ಸಲ ರಾತ್ರಿ ನಿಮ್ಮ ಊಟವಾದ ಎರಡು ಘಂಟೆಗಳ ಬಳಿಕ
ಇಸಬ್ ಗೋಲ್ ಎಂಬ ಹೊಟ್ಟನ್ನು ಒಂದು ಒಣಗಿದ ಲೋಟಕ್ಕೆ ಹಾಕಿ ಅದಕ್ಕೆ ಪೂರ್ತಿ ನೀರು ತುಂಬಿ ತಕ್ಷಣ ಕಲಕಿ ತಕ್ಷಣ ಕುಡಿಯಿರಿ.
ನಂತರ ಒಂದು ದೊಡ್ಡ ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಕಟ್ಟಿಕೊಂಡಿರುವ ಟಾಕ್ಸಿನ್ ಗಳು, ಕೊಲೆಸ್ಟರಾಲ್, ಕಫ ಇತ್ಯಾದಿ ಮಾರನೆ ದಿನ ಮಲವಿಸರ್ಜನೆಯಲ್ಲಿ ಹೋಗಿಬಿಡುತ್ತದೆ. ನೀವು ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುತ್ತಿದ್ದರೆ ನಿಮಗೆ ಆಸಿಡಿಟಿ ಉಂಟಾಗುತ್ತದೆ. ಆಗ ನಿಮಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕೆನಿಸುತ್ತದೆ. ಸಿಕ್ಕಿದ್ದನ್ನೆಲ್ಲಾ ತಿನ್ನಬೇಕೆನಿಸುತ್ತದೆ. ಜೋಪಾನ.
ಸಾವಯವ ಕೆಂಪು ಅಕ್ಕಿಯನ್ನು ಉಪಯೋಗಿಸಬೇಡಿ. ಅದರಲ್ಲಿ ನಮಗೆ ಅತಿ ಮುಖ್ಯವಾಗಿ ಬೇಕಾದ ಬಿ-ಕಾಂಪ್ಲೆಕ್ಸ್ ಇಲ್ಲ. ಮಲವಿಸರ್ಜನೆ ಏನೋ ಆಗುತ್ತದೆ. ಆದರೆ ಬಹಳ ಮುಖ್ಯವಾಗಿರುವ ಬಿ-ಕಾಂಪ್ಲೆಕ್ಸ್ ಇಲ್ಲದಿರುವ ಆ ಅಕ್ಕಿ ಊಟ ಮಾಡಿ ಏನು ಪ್ರಯೋಜನ? ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ. ನಮ್ಮ ಮನೆಯಲ್ಲಿರುವ ಚರಂಡಿಯನ್ನು ಹೇಗೆ ಚೊಕ್ಕಟವಾಗಿ ಇಟ್ಟುಕೊಳ್ಳುತ್ತೇವೋ, ಅದೇ ರೀತಿ ನಮ್ಮ ದೇಹದ ಚರಂಡಿಯನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಮೈದಾ ಹಿಟ್ಟಿನಿಂದ ಮಾಡಿರುವ ತಿಂಡಿಗಳನ್ನು ಹತ್ತಿರವೂ ಸೇರಿಸಬೇಡಿ. ಅಂದರೆ ಮೈದಾ ಹಿಟ್ಟಿನಿಂದ ಮಾಡಿದ ಬ್ರೆಡ್, ಬಿಸ್ಕತ್ ಗಳು, ದೋಸೆ, ಕರಿದ ತಿಂಡಿಗಳು, ಸಿಹಿ ತಿಂಡಿಗಳು, ಪೂರಿ, ಚಪಾತಿ ಇತ್ಯಾದಿ
ಮೈದಾ ದಿಂದ ಗೋಂದು ತಯಾರಿಸುತ್ತಾರೆ ವಾಲ್ ಪೋಸ್ಟರ್ ಅಂಟಿಸಲು ಗೊತ್ತಾ ನಿಮಗೆ? ಆಮೇಲೆ ಆ ವಾಲ್ ಪೋಸ್ಟರ್ ನ ಕೀಳಲು ಎಷ್ಟು ಕಷ್ಟ ಗೊತ್ತಾ? ಅದೇ ರೀತಿಯಲ್ಲೇ ನಮ್ಮ ದೇಹದಲ್ಲೂ ಆ ಮೈದಾ ಕೆಲಸ ಮಾಡುವುದು. ಜೋಪಾನ, ಜೋಪಾನ ನಿಮ್ಮ ದೇಹ. ಸಾಧ್ಯವಾದಷ್ಟೂ ಕಾಯಿಸಿ ಆರಿದ ನೀರನ್ನು ಕುಡಿಯಿರಿ. ಈ ಮೇಲಿನ ತಿಂಡಿಗಳಿಂದ ಪಿತ್ತ ಅತೀ ಜಾಸ್ತಿಯಾಗುತ್ತದೆ. ನೀವುಗಳು ಬರೀ ಪಿತ್ತದಿಂದ ನರಳುತ್ತಿದ್ದರೆ ಮಾಮೂಲಿ ತಣ್ಣೀರನ್ನು ಕುಡಿಯಿರಿ. ಪಿತ್ತ ಮತ್ತು ಕಫ ಆಗಿದ್ದರೆ ಕಾದಾರಿದ ನೀರನ್ನು ಎರಡು ದೊಡ್ಡ ಲೋಟದಷ್ಟು ಕುಡಿಯಿರಿ. ಬರೀ ಕಫ ಇದ್ದರೆ ಬಿಸಿ ನೀರನ್ನು ಕುಡಿಯಿರಿ. ಪಿತ್ತ ಇರುವಾಗ ಬಿಸಿ ನೀರನ್ನು ಕುಡಿಯಬೇಡಿ.

ಮಂಗಳವಾರ, ಜುಲೈ 1, 2008

ಗಂಟಲು ನೋವು

ಮುಂದುವರೆದುದು
೨)-ಸೋಮಾರಿ ಬೇರನ್ನು ಲಿಂಬೆರಸದಲ್ಲಿ ತೇಯ್ದು ಗಂಟಲಿನ ಹೊರ್ಭಾಗಕ್ಕೆ ಹಚ್ಚಬೇಕು.
೩)-ಉಪ್ಪಿನಕಾಯಿಯನ್ನು ಸ್ವಲ್ಪ ತೆಗೆದುಕೊಂಡು ಗಂಟಲು ಮೂಳೆಗೆ(ಕೆನ್ನಾಲಿಗೆಗೆ) ಹಚ್ಚಬೇಕು. ಬಂದ ಎಂಜಲನ್ನು ಉಗುಳಬೇಕು.
೪)-ಸ್ವಲ್ಪ ಬಿಸಿನೀರನ್ನು ಕುಡಿಯುತ್ತಿರಬೇಕು

ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ:
೧)-ಊಟದ ಜೊತೆ ಬೆಳ್ಳುಳ್ಳಿ ತಿನ್ನಬೆಕು.
೨)-ಹಸಿ ಶುಂಠಿಯನ್ನು ತಿನ್ನಬೇಕು.
೩)-ಸ್ವಲ್ಪ ಜೀರಿಗೆಯನ್ನು ಅಗಿದು ತಿನ್ನಬೇಕು.

ಆಮಶಂಕೆಯಲ್ಲಾಗುವ ರಕ್ತಸ್ರಾವ ತಡೆಗಟ್ಟಲು:
ನಿಂಬೆಹಣ್ಣಿನ ಪಾನಕಕ್ಕೆ ಅಡಿಗೆ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ಸ್ವಲ್ಪಮಟ್ಟಿನ ಗುಣ ಕಂಡುಬರುವುದು.

ಮೂತ್ರದ ಕಟ್ಟುವಿಕೆ:
೧)-ಚೆನ್ನಾಗಿ ಮಾಗಿದ ಅನಾನಸ್ ಹಣ್ಣಿನಿಂದ ತಯಾರಿಸಿದ ಪಾನಕ(ರಸ) ಸೇವಿಸಬೇಕು.
೨)-ಬಾಳೆಪಟ್ಟಿಯನ್ನು ಹಿಂಡಿ ರಸ ತೆಗೆದು ಒಂದು ಕಪ್ ರಸಕ್ಕೆ ಒಂದು ಸ್ಪೂನ್ ಹಸುವಿನ ತುಪ್ಪ ಸೇರಿಸಿ ಕುಡಿಯಬೇಕು.
ತಕ್ಷಣವೇ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
೩)-ಒಂದು ಕಪ್ ಟೀ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿಪುಡಿ ಸೇರಿಸಿ ಕುಡಿದರೆ ಸರಾಗ ಮೂತ್ರವಿಸರ್ಜನೆಯಾಗುತ್ತದೆ.
೪)-ಕಬ್ಬಿನ ಹಾಲಿಗೆ ಎಳೆನೀರು, ಹಸಿಶುಂಠಿರಸ, ನಿಂಬೆರಸ ಸೇರಿಸಿ ಸೇವಿಸುವುದರಿಂದ ಗುಣಕಾರಿ.
೫)-ಎಳೆನೀರನ್ನು ಸೇವಿಸಿ.
೬)-ಮೂಲಂಗಿ ಸೊಪ್ಪಿನ ರಸ ಕುಡಿಯಬೇಕು.

ಜೇನುನೊಣ ಕಚ್ಚಿದಾಗ:
ಈರುಳ್ಳಿಯನ್ನು ಹೋಳುಮಾಡಿ ಒಂದು ಹೋಳಿನಿಂದ ಕಚ್ಚಿದ ಜಾಗಕ್ಕೆ ತಿಕ್ಕಬೇಕು.
ಶ್ರವಣಶಕ್ತಿ ಹೆಚ್ಚಿಸಲು: ಒಂದು ಬಟ್ಟಲು ಮಾವಿನಹಣ್ಣಿನ ರಸವನ್ನು ಹಾಲು ಮತ್ತು ಜೇನಿನೊಂದಿಗೆ ಪ್ರತಿದಿನ ಸೇವಿಸಬೇಕು.

ವಿಷಾಹಾರ ಸೇವಿಸಿದಾಗ: ಒಂದು ಟೀ ಚಮಚದಷ್ಟು ಸಾಸಿವೆ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.

ನಿದ್ರೆ ಬಾರದಿದ್ದರೆ: ಗಸಗಸೆಯ ಹಾಲನ್ನು ತೆಂಗಿನಕಾಯಿಯ ಹಾಲಿನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು.

ಭಾನುವಾರ, ಜೂನ್ 22, 2008

ಮನೆ ಮದ್ದು-ಮುಂದುವರಿದದ್ದು

ಮುಂದುವರೆದದ್ದು
ಕಫ ಮತ್ತು ಕೆಮ್ಮು: ಹಸಿ ಶುಂಠಿಯರಸ ಮತ್ತು ವೀಳ್ಯೆದೆಲೆಯರಸವನ್ನು ಒಟ್ಟುಗೂಡಿಸಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ತಿನ್ನಬೇಕು.
ಶೀಘ್ರ ವಾಸಿಯಾಗುತ್ತದೆ.
ಸ್ತನದಲ್ಲಿ ಹಾಲು ತುಂಬಿಕೊಂಡು ಊದಿಕೊಂಡರೆ: ಪೂರ್ಣ ಅರಳಿದ ಹಿಡಿಮಲ್ಲಿಗೆ ಹೂಗಳನ್ನು ಎರಡೂ ಸ್ತನಗಳ ಮೇಲೆ ಇಟ್ಟು ಕಟ್ಟಬೇಕು ಅಥವಾ
ಹಸಿ ವೀಳ್ಯೆದೆಲೆ ಕಟ್ಟಿದರೂ ನಡೆಯುತ್ತದೆ.
ಅಜೀರ್ಣವಾದಾಗ: 1)-ಸ್ವಲ್ಪ ಓಮಕಾಳು(ಅಜವಾನ) ಸೇವಿಸಿ ಅಥವಾ ಅದರ ಕಷಾಯವನ್ನು ಕುಡಿಯಬೇಕು.
2)-ನೀರಿಗೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಅಡುಗೆ ಸೋಡ ಬೆರೆಸಿ ಸೇವಿಸಿ.
ವಾಂತಿಯಾದಾಗ: ನಿಂಬೆಹಣ್ಣನ್ನು ಅರ್ಧ ಹೆಚ್ಚಿ ಅರ್ಧ ಹೋಳಿನಲ್ಲಿ ಸಕ್ಕರೆ ಹಾಕಿ ಕಾಯಿಸಿ ಸೇವಿಸಬೇಕು.
ಗಂಟಲು ನೋವು: ಸ್ವಲ್ಪ ತಿನ್ನುವ ಸುಣ್ಣಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕದಡಬೇಕು. ಅದನ್ನು ಗಂಟಲಿನ ಹೊರಭಾಗಕ್ಕೆ ಚೆನ್ನಾಗಿ ಲೇಪಿಸಬೇಕು.

ಶನಿವಾರ, ಜೂನ್ 21, 2008

ಮನೆ ಮದ್ದು-1

ಮನೆ ಮದ್ದು-1
ಹೊಟ್ಟೆನೋವಿಗೆ: ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಶಮನವಾಗುತ್ತದೆ
ಒಣಕೆಮ್ಮು: ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗಿ ಗಂಟಲಿಗೆ ಹಿತವಾಗಿರುತ್ತದೆ.