ಮಂಗಳವಾರ, ಏಪ್ರಿಲ್ 8, 2008

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಬಿಗಿ ಹೊಟ್ಟೆ ಸಡಿಲಿಸಲು ನಾರು.

ಆಹಾರದಲ್ಲಿ ನಾರಿನ ಅಂಶ ಇಲ್ಲದಿರುವುದೇ ಮಲಬದ್ಧತೆ ಉಂಟಾಗಲು ಮುಖ್ಯ ಕಾರಣ. ನಾರಿನಂಶವಿರುವ ಆಹಾರ ಸೇವನೆ ಮಾಡುತ್ತಿದ್ದರೆ ಸಾಮಾನ್ಯವಾಗಿ ಎಂದೂ ಮಲಬದ್ಧತೆ ಆಗುವುದಿಲ್ಲ.

ನಾರು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆದರೆ ಈ ನಾರು ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೀರಿಕೊಂಡು ಗಾತ್ರಧಲ್ಲಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೊಡ್ಡ ಕರುಳಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯ ಸಂಖ್ಯೆ ಹೆಚ್ಚುತ್ತದೆ. ಈ ಉಪಯುಕ್ತ ಬ್ಯಾಕ್ಟೀರಿಯ ನಮ್ಮ ಕರುಳಿನಲ್ಲಿಯ ನೈಟ್ರೋಜೆನ್, ಗ್ಲೂಕೋಸ್, ಕೊಲೆಸ್ಟರಾಲ್ ಉಪಯೋಗಿಸಿ ವೃದ್ಧಿಹೊಂದುತ್ತವೆ. ಆದ್ದರಿಂದ ಈ ನಾರು ಮಲಬದ್ದತೆ ತಡೆಯುವುದಲ್ಲದೆ ಸಕ್ಕರೆ ಕಾಯಿಲೆ ಉಳ್ಳವರಿಗೆ, ಬೊಜ್ಜು ಇರುವ ವ್ಯಕ್ತಿಗಳಿಗೆ, ಪಿತ್ತಕೋಶದಲ್ಲಿ ಕಲ್ಲು ಇರುವವರಿಗೆ, ಹೃದಯ ರೋಗಿಗಳಿಗೆ ಪ್ರಯೋಜಕವಾಗುತ್ತವೆ.

ಪಾಶ್ಚಿಮಾತ್ಯ ಜನರು ಕಡಿಮೆ ಪ್ರಮಾಣದ ನಾರು ಸೇವಿಸುವುದರಿಂದ (೨೦ ಗ್ರಾಮ್) ಅವರಲ್ಲಿ ಅನೇಕ ರೋಗಗಳು ಉದಾ: ಕರುಳಿನ ಕ್ಯಾನ್ಸರ್, ಪಿತ್ತಕೋಶದ ಕಲ್ಲುಗಳು ಹೆಚ್ಚಾಗುತ್ತವೆ.

ಆಫ್ರಿಕಾದಲ್ಲಿ ಜನರು ಸರಾಸರಿ ೧೫೦ ಗ್ರಾಮ್ ನಷ್ಟು ನಾರು ಪದಾರ್ಥ ಸೇವಿಸುವುದರಿಂದ ಅಲ್ಲಿಯ ಜನರಿಗೆ ಈ ತೊಂದರೆಗಳು ಅಷ್ಟೇನು ಕಂಡುಬರುವುದಿಲ್ಲ. ದಿನಕ್ಕೆ ಸರಾಸರಿ ೫೦ ಗ್ರಾಮ್ ನಾರು ಉಪಯೋಗಿಸಿದರೂ ಸಾಕು, ಬಿಗಿ ಹೊಟ್ಟೆ ಸಡಿಲವಾಗುತ್ತದೆ, ಜತೆಗೆ ಇತರ ರೋಗಗಳನ್ನೂ ತಡೆಗಟ್ಟಬಹುದಾಗಿದೆ.

ಔಷಧಗಳಿಗೆ ಶರಣು ಹೋಗುವುದು ಒಳ್ಳೆಯದಲ್ಲ. ಅವು ಅಭ್ಯಾಸ ಅಥವಾ ಚಟ ಉಂಟು ಮಾಡುತ್ತವೆ ಹಾಗೂ ಮಲಬದ್ಡತೆ ಗುಣ ಹೊಂದುವುದಿಲ್ಲ. ನಾರಿನಂಶ ಇರುವ ಆಹಾರ ಪದಾರ್ಥಗಳೆಂದರೆ - ಸೊಪ್ಪು, ಬೀಟ್ ರೂಟ್, ಕ್ಯಾಬೇಜ್, ಆಲೂಗೆಡ್ಡೆ, ಕೆಂಪು ಅಕ್ಕಿ, ರಾಗಿ, ಜೋಳ, ನವಣೆ, ಸಜ್ಜೆ, ತೊಗರೆ, ಹೆಸರು, ಉದ್ದು, ಅಂಟು, ಸೇಬು, ಬಾಳೆಹಣ್ಣು, ದ್ರಾಕ್ಷಿ ಇತ್ಯಾದಿ. ಮೇಲೆ ಹೇಳಿದ ಕೆಲವು ಪದಾರ್ಥಗಳಲ್ಲಿ ಅಂದರೆ ಜೋಳ, ನವಣೆ, ಸಜ್ಜೆ, ಉದ್ದು, ಬಾಳೇಹಣ್ಣು ಕೆಲವರಿಗೆ ಆಗದೇ ಇರಬಹುದು. ಅಂಥಹವರು ಕೆಂಪು ಅಕ್ಕಿಯನ್ನು ಉಪಯೋಗಿಸಿದರೆ ಬಹಳ ಅನುಕೂಲವಾಗುತ್ತದೆ.

ರಾಗಿ ಅಭ್ಯಾಸ ಇರುವವರಿಗೆ ಏನೂ ತೊಂದರೆ ಇರುವುದಿಲ್ಲ. ಪಾಲೀಶ್ ಮಾಡಿದ ಅಕ್ಕಿ, ಬೇಕರಿ ತಿಂಡಿಗಳು, ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಇತ್ಯಾಧಿಗಳನ್ನು ಉಪಯೋಗಿಸುವವರು ಮಲಬದ್ದತೆಗೆ ಸುಲಭವಾಗಿ ತುತ್ತಾಗುವರು. ಆದ್ದರಿಂದ ಹೇರಳವಾಗಿ ಹೊಟ್ಟು ಇರುವ(ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಕೆಂಪು ಅಕ್ಕಿಯನ್ನು ನಿಮ್ಮ ಊಟದಲ್ಲಿ ಪ್ರತಿದಿನವೂ ಊಟಮಾಡುತ್ತಿದ್ದರೆ ಮಲಬದ್ದತೆಯ ತೊಂದರೆಗಳೇ ಇರುವುದಿಲ್ಲ.

ಹೆಚ್.ಕೆ.ಸತ್ಯಪ್ರಕಾಶ್.
ಕೃಪೆ : ಪ್ರಜಾವಾಣಿ ೯೮೮೬೩ ೩೪೬೬೭
ಡಾ. ಸಿ. ಪ್ರಕಾಶ್ ರಾವ್.

ಕಾಮೆಂಟ್‌ಗಳಿಲ್ಲ: