ಶನಿವಾರ, ಫೆಬ್ರವರಿ 2, 2008

ನಾರಿನಿಂದ ಆರೋಗ್ಯ ಭಾಗ್ಯ

ನಾರಿನಿಂದ ಆರೋಗ್ಯಭಾಗ್ಯ

ಹೂವಿನಿಂದ ನಾರು ಸೇರುವುದು ಸ್ವರ್ಗ
ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ.

'ನಾರು-ಬೇರುಗಳು' ಎಂಬ ಉಪ ಅಧ್ಯಾಯದಲ್ಲಿ ವಿಜ್ನಾನದ ಅಭಿಪ್ರಾಯವನ್ನು ತಿಳಿಸಿ ಆಗಿದೆ. ನಿಸರ್ಗಜೀವನಕ್ಕೆ ಮುಂಚಿನಿಂದಲೂ ನಾರಿನ ಪಾತ್ರದ ಬಗ್ಗೆ ಅಭಿಮಾನವಿತ್ತು. ಋಷಿಗಳ ಆಹಾರವಾದ ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳಲ್ಲಿ ನಾರು-ಬೇರುಗಳು ಸಹಜವಾಗಿದ್ದವು. ಮುಂದೆ ಬೇಯಿಸಿದ ಆಹಾರವನ್ನು ಪ್ರಾರಂಭಮಾಡಿದಮೇಲೂ ಸಹ ಅವುಗಳು ಹೆಚ್ಚು ಹಾಳಾಗುತ್ತಿರಲಿಲ್ಲ. ತಾಂತ್ರಿಕತೆ ಬೆಳೆದಂತೆ ನಾರು-ಬೇರುಗಳು ಆಹಾರದಿಂದ ದೂರವಾಗುತ್ತಾ ಬಂದವು.

ನಾರನ್ನು ಆಹಾರದಿಂದ ತೆಗೆದಷ್ಟೂ ನಾಗರೀಕ ಜೀವನವೆಂಬ ಭ್ರಮೆ! ಸಂತೆಯಿಂದ ತಂದ ತರಕಾರಿಗಳಿಗೆ ಮೊದಲ ಮೋಕ್ಷ- 'ಚಮ್ಡಾ ನಿಕಾಲ್!'. ಕೆಲವು ಹೆಂಗಸರು ಈ ಕಲೆಯಲ್ಲಿ ಬಹಳ ನಿಪುಣರು! ಅವರ ಕೈಗೆ ಸಿಕ್ಕಿದ ಯಾವುದೇ ತರಕಾರಿಗಾದರೂ ಬಹಳ ಕಲಾತ್ಮಕವಾಗಿ ಚರ್ಮ ಸುಲಿದುಬಿಡುತ್ತಾರೆ! ಅದರಲ್ಲೂ ಮನೆಗೆ ಗೌರವಾನ್ವಿತ ಅತಿಥಿ ಬಂದರನಕ ತೀರಿತು, ಆಗ ತರಕಾರಿಗಳ ಸ್ಥಿತಿ ತುಂಬಾ ಚಿಂತಾಜನಕ. ಯಾವಾಗಲೋ ಯಾರೋ ಹಲ್ಲಿಲ್ಲದ ಅತಿಥಿ ಮನೆಗೆ ಬಂದಿರಬೇಕು. ಅವನು ಸೇಬಿನ ಹಣ್ಣನ್ನು ಸಿಪ್ಪೇ ತೆಗೆಸಿ ತಿಂದಿರಬೇಕು. ಅಂದಿನಿಂದ ಪ್ರಾರಂಭವಾಯ್ತು ನೋಡಿ ಈ ಸಿಪ್ಪೆ ಸುಲಿಯುವ ಸಂತತಿ.

ಬಣ್ಣ ಬಣ್ಣದ ಸೇಬಿನ ಸಿಪ್ಪೆ
ಸೇರುವುದೆಲ್ಲಾ ಮನೆಯಾ ತಿಪ್ಪೆ,
ಹೊಟ್ಟೇ ತಿಪ್ಪೆಗೆ ಸಿಪ್ಪೇ ತೆಗೆದಾ ಹಣ್ಣು
ಕಡೆಗೆ ತರುವುದು ಹೊಟ್ಟೆಯಾ ಹುಣ್ಣು.

ನಮ್ಮ ಜನಗಳು ಹೇಳುತ್ತಾರೆ, "ತರಕಾರಿಗಳನ್ನು ಹಸಿಯದಾಗಿಯೇ ತಿನ್ನುವುದು ಒಳ್ಳೆಯದು". "ಅದಕ್ಕಾಗಿಯೇ ನಮ್ಮ ಮಗುವಿಗೆ ಹಸಿಯ ಕ್ಯಾರಟ್ ತಿನ್ನಲು ಕೊಡುತ್ತೇನೆ." "ಯಾವಾಗ?" " ಯಾವಾಗಾದರೊಮ್ಮೆ, ತಂದಾಗ". "ಎಷ್ಟು?" "ಒಂದು ಸಣ್ಣದು." ಏನೋ ಕ್ಯಾರಟ್ ಗೆ ಸಹಾಯ ಮಾಡುವಂತೆ ಹೇಳುವ ಧ್ವನಿ!

"ಹೆಚ್ಚು ತರಕಾರಿಗಳನ್ನು ಉಪಯೋಗಿಸಿ". ತರಕಾರಿಗಳು ತುಂಬಾ ದುಬಾರಿ. ಇದು ಮೊದಲ ಅಡಚಣೆ. ದುಬಾರಿಯ ತರಕಾರಿಗಳನ್ನೇ ತಿನ್ನಿರೆಂದು ಯಾರು ಹೇಳಿದರು? ಯಾವಾಗಲೂ ಒಂದೆರಡಾದರೂ ತರಕಾರಿಗಳು ಅಗ್ಗವಾಗಿಯೇ ಇರುತ್ತವೆ. ಇಂದು ತಂದ ತರಕಾರಿಯನ್ನು ನಾಳೆ ತರುವಂತಿಲ್ಲ. ಯಜಮಾನರ ಹಾಗೂ ಮಗನ ಕಟ್ಟಪ್ಪಣೆ. ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರಕಾರಿ ಸೇರುವುದಿಲ್ಲ. ಸೇರುವುದಿಲ್ಲವೆಂದರೇನು? ನಾವು ಬೆಳೆಸಿಕೊಂಡ ಭಾವನೆ. ಅದನ್ನು ತಿದ್ದಿಕೊಳ್ಳಬೇಕು. ಋತುಗಳನ್ನು ಅನುಸರಿಸಿ ತರಕಾರಿಗಳು ಬರುತ್ತವೆ. ಅದನ್ನೇ ಆಗ ತರಬೇಕು. ಆ ಋತುಪೂರ್ಣ ಆ ತರಕಾರಿಯನ್ನೇ ತಿನ್ನಬೇಕು. ಆಗ ಅದು ಕಡಿಮೆ ಬೆಲೆಗೂ ಸಿಕ್ಕುತ್ತದೆ. ಹಸಿಯಾಗಿಯೇ ಉಪಯೋಗಿಸಿದರೆ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಿಂದ ಹಣದ ಉಳಿತಾಯ.

ಹಣ್ಣು ಹಂಪಲುಗಳ ಜತೆಗೆ ಏಕದಳ-ದ್ವಿದಳ ಧಾನ್ಯಗಳನ್ನೂ ತನ್ನ ಆಹಾರದಲ್ಲಿ ಮನುಜ ಸೇರಿಸಿದ ಮೇಲೆ ಬಹುಶಃ ಮೊದಲು ಅವುಗಳನ್ನೂ ಹಸಿಯದಾಗಿಯೇ ತಿಂದಿರಬೇಕು. ಬೆಂಕಿಯ ಆಗಮನದ ನಂತರ ಹೆಚ್ಚು ಸಂಸ್ಕರಣವಿಲ್ಲದೆ ಉಪಯೋಗಿಸಿದ್ದಾನೆ. ಕಾರಣ ಸಂಸ್ಕರಣ ಮಾಡಲು ತಾಂತ್ರಿಕತೆಯ ಅರಿವಿರಲಿಲ್ಲ. ಆದ್ದರಿಂದ ಹೊಟ್ಟೆ ಹಾಳಾಗುತ್ತಿರಲಿಲ್ಲ. ಸಹಜ ನಾರು-ಬೇರುಗಳು ತೆಗೆಯಲ್ಪಡುತ್ತಿರಲಿಲ್ಲ.

ವಿಜ್ನಾನ ತಿಳಿಯದೇ ಆಹಾರ ಆಗಿತ್ತು ಅಂದು ವೈಜ್ನಾನಿಕ
ವಿಜ್ನಾನ ತಿಳಿದೂ ಇಂದು ಆಗಿದೆ ಅದು ಅವೈಜ್ನಾನಿಕ!

ಅಕ್ಕಿಯ ಪಾಡು : ಕೆಂಪು ಅಕ್ಕಿಯ ಅನ್ನ-ಮಕ್ಕಳಿಗೆ ಬಣ್ಣ ಇಷ್ಟವಿಲ್ಲ. ಮುದುಕರಿಗೆ ಜೀರ್ಣವಾಗುವುದಿಲ್ಲ.(ಮೂವತ್ತಕ್ಕೆ ಮುಪ್ಪು ಬಂದಿರುವುದಲ್ಲ!) ಮಡದಿಗೆ ಮಾಡಲು ಬರುವುದಿಲ್ಲ. ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ವಿಜ್ನಾನ ಏನು ಹೇಳುತ್ತದೆ 'ಸಮತೋಲನ ಆಹಾರ' ಅನ್ನುವ ವಿಭಾಗದಲ್ಲಿ ನೋಡಿ.

ಹೆಚ್ಚು ಪಾಲೀಶ್ ಮಾಡಿದಷ್ಟೂ ಹೆಚ್ಚು ಜೀವಸತ್ವಗಳ ನಾಶ. ಬಿಳಿಯ ಅಕ್ಕಿಯ ಬಗ್ಗೆ ನಮಗಿರುವ ಮೋಹ ಅದನ್ನು ಹೆಚ್ಚು ಹೆಚ್ಚು ಪಾಲೀಶ್ ಮಾಡಲು ಪ್ರೇರೇಪಿಸುತ್ತದೆ.

ಬಿಳಿಯ ಅಕ್ಕಿಯಿಂದ ಬಿಳಿಚಿಕೊಳ್ಳಣ್ಣ
'ಅನೀಮಿಯ' ನಿನ್ನ ಸಂಗಾತಿಯಾಗುವುದಣ್ಣ,
ಪುಸ್ತಕದಿ ಹೇಳುವಿರಿ ತಿನ್ನಿ ಕೊಟ್ಟಣದ ಅಕ್ಕಿ
ಹಿಂದೆ ದಿನವೂ ಕುಟ್ಟುತ್ತಿದ್ದಳು ಭತ್ತವನು ಲಕ್ಕಿ,
ಅಕ್ಕಿಯನು ಕುಟ್ಟುವವರು ಯಾರು ಇಂದು?
ನೀವೇ ಕುಟ್ಟಿರೆಂದು ಹೇಳಲಾಗುವುದೇ ಧೈರ್ಯ ತಂದು?

ಎರಡಕ್ಕೂ ಏನು ವ್ಯತ್ಯಾಸ? ಜೀವಸತ್ವಗಳು ಹಾಗೂ ಲವಣಗಳು, ಧಾನ್ಯಕ್ಕೂ ಅದರ ಹೊರ ಕವಚಕ್ಕೂ ಮಧ್ಯೆ ಶೇಖರವಾಗಿರುವುವು. ಧಾನ್ಯಕ್ಕೆ ಅದು ಕವಚದ ಹತ್ತಿರವಿದ್ದಷ್ಟೂ ಮೊಳಕೆಯೊಡೆಯಲು ಬೇಗ ಉಪಯೋಗಿಸಿಕೊಳ್ಳಲು ಸಹಾಯವಾಗಲೆಂದು ನಿಸರ್ಗದ ಬಯಕೆಯಿರಬಹುದು. ನಾವು ಅದನ್ನು ತೆಗೆದು ಒಗೆದುಬಿಡುತ್ತೇವೆ. ಜತೆಗೆ ಅಕ್ಕಿಯ ಮೇಲಿನ ತೌಡು, ನಾರಿನ ಕಾರ್ಯವನ್ನೂ ಎಸಗುತ್ತದೆ.

ಹಾಡು ನೀ ಹಾಡು ಅಕ್ಕಿಯಾ ಹಾಡು
ಸತ್ವವನು ಕಳಕೊಂಡ ಅದರ ಪಾಡು.
ಹೊಟ್ಟೆಯಿಂದ ಹೊರಗೆ ಹೋಗಲೂ ಆಗದು
ಒಳಗೆ ಉಳಿಯಲು ಜೀವಶಕ್ತಿ ಬಿಡದು.
ಪಾಲೀಶ್ ಅಕ್ಕಿಗೆ ಬಂದಿದೆ ಈ ನಾಯಿ ಪಾಡು
ಹಾದು, ನೀ ಹಾಡು, ಅಕ್ಕಿಯಾ ಹಾಡು.
ತಿಂದವಗಿಲ್ಲ ಇದರಿಂದ ಉಪಯೋಗ ತಂದಿಹುದು ಅನೇಕ ಹೊಸ ಬಗೆಯ ರೋಗ.

"ಕುಟ್ಟಿದ ಅಕ್ಕಿ ನಮಗೆ ಸಿಗುವುದಿಲ್ಲ." ಸರಳವಾದ ಉತ್ತರ. ಯಾರಾದರೂ ಇಂತಹ ಅಕ್ಕಿ ಬೇಕೆಂದು ಕೇಳಿದ್ದಾರೆಯೇ? ನಮಗೆ ಬೇಕು ಅನ್ನಿಸುವುದೇ ಬಿಳಿಯ ಅಕ್ಕಿ. ಅದನ್ನೇ ನಾವು ಕೇಳುತ್ತೇವೆ. ಬಿಳಿಯ ಅಕ್ಕಿಯನ್ನು ತಿನ್ನಲು ಕಾರಣ, ನೋಡಲು ಬೆಳ್ಳಗಿರುತ್ತದೆ. ಬಿಳಿ, ಮನುಷ್ಯನ ಮೋಹಕ ಬಣ್ಣ. ಅದು ಸಾರು, ಚಟ್ಣಿ, ಹುಳಿ, ಸಾಂಬಾರ್ ಇತ್ಯಾದಿಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾರಣ ಅದಕ್ಕೆ ಸ್ವಂತಿಕೆ ಇಲ್ಲ. ಜೀರ್ಣವಾಗಲು ಸುಲಭ. ಮೂರು ತಿಂಗಳಲ್ಲಿ ಬೆಳೆ ಬರುತ್ತದೆ. ಇದರಿಂದ ರೈತನಿಗೆ ಅನುಕೂಲ. ವ್ಯಾಪಾರಿಗೂ ಇದೇ ಉತ್ತಮ. ಕೆಂಪುಭತ್ತ ಇನ್ನೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಕೆಂಪಕ್ಕಿಗೆ ಬೇಗ ಹುಳು ಬೀಳುತ್ತದೆ. ಕಾರಣ ತೌಡಿನಲ್ಲಿರುವ ಎಣ್ಣೆಯಿಂದ ಅದು ಸಿಹಿ. ಬಿಳಿ ಅಕ್ಕಿಗೆ ಅಷ್ಟು ಬೇಗ ಹುಳು ಬೀಳುವುದಿಲ್ಲ.

ಗೋಧಿಯಾ ಗಾನಾ : ಇನ್ನು ಗೋಧಿಯಾ ಪಾಡು. ಮಿಷನ್ ಗೆ ಹಾಕಿದ ನಂತರ ಅದನ್ನು ಚೆನ್ನಾಗಿ ಜರಡಿ ಮಾಡಿ ಹೊಟ್ಟನ್ನು ಹೊರಕ್ಕೆ ಎಸೆಯಲೇಬೇಕೆಂಬ ತೀರ್ಮಾನ ಮಾಡಿಕೊಂಡಿದೆ ಇಂದಿನ ನಾರೀ ಜಗತ್ತು. ವ್ಯಾಪಾರೀ ಬುದ್ಧಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಯಿತು. ಹೆಚ್ಚು ದಿನ ಹಾಳಾಗದಂತೆ ಈ ಹಿಟ್ಟನ್ನು ಶೇಖರಿಸಿಡುವುದು ಹೇಗೆ? ಶೇಖರಣೆಗೆ ತೊಂದರೆ ಮಾಡುವವು ಕಿಣ್ವಗಳು ಹಾಗೂ ಜೀವಸತ್ವಗಳು. ಅವುಗಳನ್ನು ಬೇರ್ಪಡಿಸಿದರೆ? ತಂತ್ರಜ್ನಾನದ ಸಹಾಯ ಇದ್ದೇ ಇದೆಯಲ್ಲ, ದ್ರೌಪದಿಯ ಗತಿ ಗೋಧಿಗೂ ಬಂತು! ಕೃಷ್ಣ ಕೊಟ್ಟ ಒಂದೊಂದೇ ಸೀರೆಯನ್ನು ದುಶ್ಶಾಸನ ಸೆಳೆದಂತೆ, ಗೋಧಿಯ ಒಂದೊಂದು ಪೊರೆಯನ್ನೂ ಬೇರ್ಪಡಿಸಲಾಯ್ತು. ಮೊದಲನೆಯ ಪೊರೆ ಕೋಳಿಗೆ, ಎರಡನೆಯ ಪೊರೆ ದನ್ನಕ್ಕೆ, ಮೂರನೆಯದು ಎಣ್ಣೆಗೆ, ಕಡೆಗೆ ಉಳಿದ ಪಿಷ್ಟ ಮಾನವನಿಗೆ!! ಹೀಗೆ ಮೈದಾ ಹಿಟ್ಟಿನ ಜನನವಾಯ್ತು. ಮುಂದೆ ಅದರ ಮಕ್ಕಳು, ಮೊಮ್ಮಕ್ಕಳು ಆದ ಬಿಳಿಯ ಬ್ರೆಡ್, ಬನ್, ಬಿಸ್ಕತ್ಗಳು ಹುಟ್ಟಿಕೊಂಡವು. ಮನೆಯಲ್ಲಿನಾ ಮುದುಕಿ ಗೊಣಗುತ್ತಲೇ ಇದ್ದಾಳೆ, ಅವುಗಳು ಮಂದ.

ಅಜ್ಜಿಯ ಗೊಣಗಾಟ ಬೇಕರಿಯ ತಿಂಡಿಗಳು ಮಂದ
ಅವಳಿಗೇನು ಗೊತ್ತು ಅವುಗಳಿಂದ ಸಿಗುವ ಆನಂದ!

ಮಂದ ಅಂದರೇನು? ಗತಿ ನಿಧಾನ. ಮಲರೂಪದಲ್ಲಿ ಹೊರಕ್ಕೆ ದೂಡಲು ಹೊಟ್ಟು ಇಲ್ಲದುದರಿಂದ ಮಲಬದ್ಧತೆ. ಮೈದಾಹಿಟ್ಟನ್ನು ಲೋಕಕ್ಕೆ ಕೊಟ್ಟ ಸಂಸ್ಕೃತಿ ಮಲಬದ್ಧತೆಯನ್ನೂ ಶಾಶ್ವತವಾಗಿ ನೀಡಿತು. ಹಾಗಾದರೆ ಈ ಮೈದಾದಿಂದ ಏನನ್ನು ತಯಾರಿಸಬಹುದು? ಸಿನೆಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವ ಗೋಂದನ್ನು ತಯಾರಿಸಬಹುದು! ಅದೊಂದಕ್ಕೇ ಅದು ಅತ್ಯುತ್ತಮ ವಸ್ತು. ಅದೇ ಕೆಲಸವನ್ನು ಅದು ಹೊಟ್ಟೆಯ ಒಳಗೂ ಮಾಡಿ, ದೊಡ್ಡಕರುಳಿನ ನೆರಿಗೆಗಳಿಗೆ ಅಂಟಿಕೊಂಡು ಅದನ್ನು ಒಂದು ಕೊಳಾಯಿಯ ಪೈಪಿನಂತೆ ಮಾಡಿಬಿಡುತ್ತದೆ. ಮಲ, ಒಂದರಿಂದ ಏಳುದಿನಗಳವರೆಗೆ ತಡೆಯಲ್ಪಡುತ್ತದೆ. ಮತ್ತೆ ಮೂರು ದಿನ ಭೇದಿ, ಕೊಳಾಯಿಯಿಂದ ನೀರು ಬರುವಂತೆ ಬರುತ್ತದೆ.

ಬಿಸ್ಕತ್, ಬಿಳಿಯ ಬ್ರೆಡ್ ಗಳ ಮಾಟ
ಅದೇ ನಾಗರೀಕನ ಇಂದಿನ ಊಟ,
ಅದರಿಂದಲೇ ಇಷ್ಟೊಂದು ರೋಗಗಳ ಕಾಟ!!
ಬೇಕರಿಯ ತಿಂಡಿಯನು ತಿನ್ನೋಣ
'ಬಿ' ಕಾಂಪ್ಲೆಕ್ಸ್ ಮಾತ್ರೆಯನು ನುಂಗೋಣ,
ತಿನ್ನಬೇಕಾದ ಹೊಟ್ಟನ್ನು ಹೊರಕ್ಕೆ ಚೆಲ್ಲೋಣ
ಅದಕೇ ದುಡ್ಡು ಕೊಟ್ಟು ಮಾತ್ರೆಯ ರೂಪದಿ ಕೊಳ್ಳೋಣ!
ನಾವು ನಾಗರೀಕರು!
ನಮಗ್ಯಾರು ಸಮಾನರು?!

ಹಾಗಾದರೆ ಬ್ರೆಡ್ ತಿನ್ನುವುದು ತಪ್ಪೇ? ಮನುಷ್ಯ ಕಂಡುಹಿಡಿದ ಆಹಾರಗಳಲ್ಲಿ ಬ್ರೆಡ್ ಒಂದು ಉತ್ತಮ ಆಹಾರವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ಮೈದಾದಿಂದ ತಯಾರಿಸಿದುದಲ್ಲ. ಹೊಟ್ಟು ಸಮೇತ ಇರುವ ಗೋಧೀಹಿಟ್ಟಿನಿಂದ ತಯಾರಿಸಿದ ಕಂದು ಬ್ರೆಡ್. ಅದನ್ನು 'ಗ್ರಹಾಂಸ್' ಎಂದೂ ಕರೆಯುತ್ತಾರೆ. ಅಮೇರಿಕದ ಡಾ.ಗ್ರಹಾಂ ಇದರ ಚಿಂತಕ. ಮಲಬದ್ಧತೆಯ ನಿವಾರಣೆಗೆ ಈ ಬ್ರೆಡ್ ಅವಶ್ಯಕವೆಂದು ಅವನ ಮತ. ಬಿಳಿಯ ಬ್ರೆಡ್ ಒಬ್ಬರ ಬಾಯಿಗೆ, ಮತ್ತೊಬ್ಬರ ಗಲ್ಲಾಪೆಟ್ಟಿಗೆಗೆ ಹಿತವಾಗಿರುವುದರಿಂದ ಬ್ರೌನ್ ಬ್ರೆಡ್ ಬಜಾರಿನಿಂದ ಮಾಯ! ಬ್ರಿಟನ್ ತಾನು ಆಳಿದ ದೇಶಗಳಲ್ಲೆಲ್ಲಾ ಈ ಬಿಳಿಯ ಬ್ರೆಡ್, ಬಿಳಿಯ ಸಕ್ಕರೆಯನ್ನು ತಿನ್ನುವ ಕಲೆಯನ್ನು ಕಲಿಸಿ ಶಾಶ್ವತವಾಗಿ ರೋಗಿಗಳಾಗುವಂತೆ ಮಾಡಿತು. ಆಫ್ರಿಕಾ, ಏಷ್ಯಾದ ಅರೋಗ್ಯವಂತ ಜನಾಂಗ ಇದರ ಮೋಹಕ್ಕೆ ಬಿದ್ದು ನರಳುವಂತಾಯ್ತು.

ರಾಗಿಯ ರಾಗ : ಹಿಂದೆ ಯಾವುದಾದರೂ ಹಳ್ಳಿಗೆ ಬೆಳಿಗ್ಗೆ ನಾಲ್ಕು ಗಂಟೆಗೆ ನೀವು ಹೋಗಿದ್ದರೆ, ಪ್ರತಿಮನೆಯಲ್ಲೂ ಹಾಡುಗಳು ಕೇಳುತ್ತಿದ್ದವು. ಈಗ ಆಕಾಶವಾಣಿಯಲ್ಲಷ್ಟೇ ಅವು ಜೀವಂತವಾಗಿವೆ. ಅದೂ ಕೆಲವು ಮುದುಕಿಯರು ಬಂದು ಹಾಡುತ್ತಾರೆ. ಬಹುಶಃ ಅವರ ನಂತರ ಆ ಹಾಡುಗಳು ಅವರ ಜಾಡನ್ನೇ ಹಿಡಿಯಬಹುದು.! ಈಗ ನಿಸರ್ಗ ಚಿಕಿತ್ಸಾಲಯದಲ್ಲಿ ರಾಗಿಯನ್ನು ಬೀಸುವ ಹಗುರವಾದ ಕಲ್ಲನ್ನು ಇಟ್ಟಿರುತ್ತಾರೆ. ಅಲ್ಲಿ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಂದಿರುವ ಹೆಂಗಸರು ರಾಗಿಯನ್ನು ಬೀಸುವ ವ್ಯಾಯಾಮ(ನಾಟಕ) ವನ್ನು ಮಾಡುತ್ತಾರೆ! ರಾಗಿಯದು ಒಂದು ಒಳ್ಳೆಯ ಗುಣ, ಹಿಟ್ಟಿನಿಂದ ಹೊಟ್ಟನ್ನು ಬೇರ್ಪಡಿಸಲಾಗುವುದಿಲ್ಲ. ಆದರೆ, ಮಿಷನ್ ಗೆ ಹಾಕಿ ಹೆಚ್ಚು ನುಣುಪು ಮಾಡುವುದರಿಂದ ಅದರ ಗುಣ ಹಾಳಾಗುತ್ತದೆ.

ಪ್ರ್ರಣಿಗಳ ಆರೋಗ್ಯದಾ ಗುಟ್ಟು
ಅವು ತಿನ್ನುವ ತಾಜಾ ಆಹಾರದ ಹೊಟ್ಟು.

ಮಾನವನ ರೋಗದ ಜೀವನ ರಟ್ಟು
ಕಾರಣ, ಮಿಷನ್ ಗೆ ಹಾಕಿದ ಹಿಟ್ಟು.
ತಿಂದು ತಿಂದು ಬರಿಯ ಬೂದಿ
ಬೇಗ ಹಿಡಿವುದು ಶರೀರ ಸ್ಮಶಾನದ ಹಾದಿ.

ಶರೀರದಲ್ಲಿ ನಾರು-ಬೇರು, ಹೊಟ್ಟು, ಇವುಗಳ ಕೆಲಸವೇನು? ಇವು ಜೀರ್ಣವಾಗುವುದಿಲ್ಲ. ದೊಡ್ಡ ಕರುಳಿನ ಕಡೆಯ ಭಾಗ ಹೆಗ್ಗರಳು(ಕೊಲೋನ್). ಇದನ್ನು ಸ್ವಚ್ಚವಾಗಿಡುವುದೇ ಇವುಗಳ ಕೆಲಸ, ಅಂದರೆ ಪೊರಕೆಯ ಕೆಲಸ. ಎಂದೋ ಒಮ್ಮೆ ಒಂದು ಚೂರು ಹಸಿಯ ತರಕಾರಿಯನ್ನಾಗಲಿ, ಹಣ್ಣನ್ನಾಗಲಿ ತಿನ್ನುವುದರಿಂದ ಯಾವುದೇ ವಿಧವಾದ ಅನುಕೂಲವೂ ಇಲ್ಲ. ಪ್ರತಿ ಆಹಾರದಲ್ಲೂ ನಾರು-ಬೇರಿನ ಅಂಶ ಇರಲೇಬೇಕು. ಅನೇಕರು ತರಕಾರಿಗಳನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಆದರೆ ಯಾವ ರೀತಿ? ಹಿಂದೆ ತಿಳಿಸಿದಂತೆ ಅವುಗಳ ಚರ್ಮ ಸುಲಿದು, ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿ ನೀರಿನಲ್ಲಿ ತೊಳೆದು, 'ಸಿ' ಜೀವಸತ್ವವನ್ನು ಚರಂಡಿಗೆ ಚೆಲ್ಲಿ, ಎಣ್ಣೆಯ ಒಗ್ಗರಣೆಯಲ್ಲಿ ಚೆನ್ನಾಗಿ ಹುರಿದು, ನಂತರ ಉಪ್ಪು, ಹುಳಿ, ಕಾರ ಇತ್ಯಾದಿ ಮಸಾಲೆ ಪದಾರ್ಥಗಳನ್ನು ಲೇಪಿಸಿ, ಪಲ್ಯ, ಗೊಜ್ಜು, ಸಾಂಬಾರ್.... ಇತ್ಯಾದಿ. ಇದರ ಜೊತೆಗೆ ಬಿಳಿಯ ಅಕ್ಕಿಯ ಇಡ್ಲಿ, ದೋಸೆ, ಚಿತ್ರಾನ್ನ, ಹೊಟ್ಟು ತೆಗೆದ ಹಿಟ್ಟಿನ ಚಪಾತಿ.

ಒಟ್ಟಿನಲ್ಲಿ ಇದು ಹೇಗಾಗುತ್ತದೆಂದರೆ, ಒಂದು ಮೆತ್ತನೆಯ ಪೊರಕೆಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ, ಎಣ್ಣೆಯಲ್ಲಿ ಅದ್ದಿ, ಮನೆಯನ್ನು ಗುಡಿಸಲು ಪ್ರಾರಂಭಿಸಿದಂತೆ! ಈ ಪೊರಕೆ ಕಸ ಗುಡಿಸಲು ಸಾಧ್ಯವೇ?! ಈಗ ನಾವು ತರಕಾರಿಗಳನ್ನು ಉಪಯೋಗಿಸುತ್ತಿರುವ ರೀತಿಯೂ ಹೀಗೆಯೇ. ಅದಕ್ಕಾಗಿಯೇ ನಿರೀಕ್ಷಿತ ಫಲ ದೊರಕುತ್ತಿಲ್ಲ. ಪ್ರತಿ ಬೇಯಿಸಿದ ಆಹಾರದ ಜೊತೆ ಅದರಷ್ಟೆ ಅಂಶದ ಹಸಿಯ ತರಕಾರಿಗಳ 'ಸಲಾಡ್' ಅವಶ್ಯಕತೆಯಿದೆ. ಬೇಯಿಸುವುದರಿಂದ ನಾರಿನ ಅಂಶವೇನು ನಾಶವಾಗುವುದಿಲ್ಲ. ಆದರೆ ಅದು ತುಂಬಾ ಮೃದುವಾಗುತ್ತದೆ. ಹೀಗೆ ಮೃದುವಾದ ನಾರು-ಬೇರು, ಹೊಟ್ಟು, ಸರಿಯಾದ ಪೊರಕೆಯ ಕೆಲಸವನ್ನು ಮಾಡಲಾರವು. ಪ್ರತಿ ಊತದಲ್ಲಿಯೂ ಅರ್ಧದಷ್ಟು ಹಸಿಯ ತರಕಾರಿಗಳ ಸಲಾಡ್ ಇದ್ದರೆ, ಅವುಗಳ ನಾರು-ಬೇರು ತಾನು ಜೀರ್ಣವಾಗದೆ, ಜೀರ್ಣಕ್ರಿಯೆಗೆ ತನ್ನಲ್ಲಿರುವ ಕಿಣ್ವಗಳ ಮುಖಾಂತರ ಸಹಾಯ ಮಾಡಿ, ಉಳಿದ ಅಂಶವು ಪೊರಕೆಯ ಕೆಲಸ ಮಾಡಿ ಕೊಳೆಯನ್ನು ಶರೀರದಿಂದ ಹೊರಕ್ಕೆ ದೂಡುತ್ತವೆ. ಮಿಲ್ಲಿಗೆ ಹಾಕುವುದರಿಂದ ಧಾನ್ಯಗಳ ಹೊಟ್ಟು ತುಂಬ ಮೃದುವಾಗಿ, ನೀರನ್ನು ಹೀರುವ ಅಂಶ ಕಡಿಮೆಯಾಗುತ್ತದೆ. ಅದು ನೈಸರ್ಗಿಕವಾಗಿದ್ದರೆ ಹೆಚ್ಚು ನೀರನ್ನು ಹೀರಿ ಉಬ್ಬುತ್ತದೆ. ಅದರ ಸಂಪರ್ಕದಿಂದ ಮಲ ಮೃದುವಾಗಿ, ಹೊರಗೆ ಹೋಗಲು ಸಹಾಯವಾಗುತ್ತದೆ. ಆದ್ದರಿಂದ ಧಾನ್ಯಗಳ ಮೇಲಿನ ಹೊಟ್ಟು, ತರಕಾರಿ, ಹಣ್ಣುಗಳ ಮೇಲಿನ ಸಿಪ್ಪೆ ಮುಂತಾದ ನಾರು-ಬೇರಿನ ಅಂಶಗಳನ್ನು ಆಹಾರವಾಗಿ ನೈಸರ್ಗಿಕವಾಗಿಯೇ ಉಪಯೋಗಿಸಿದಲ್ಲಿ, ಕ್ಯಾನ್ಸರ್, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಅಧಿಕ ಕೊಲೆಸ್ಟರಾಲ್, ಬೊಜ್ಜು, ಹೃದಯಾಘಾತ, ಎಲ್ಲವನ್ನೂ ತಪ್ಪಿಸಿಕೊಳ್ಳಬಹುದು.

*ಬೇಯಿಸಿದ ಹಾಗೂ ಹಸಿಯ ಆಹಾರ ಬೆರೆಸಬಹುದೇ? ಕೆಲವರ ಮತ ಇವೆರಡನ್ನೂ ಬೆರೆಸಬಾರದೆಂದು. ಆದರೆ ಬೇಯಿಸಿದ ಆಹಾರದೊಂದಿಗೆ ಹಸಿಯ ತರಕಾರಿಗಳ ಸಲಾಡ್ ಚೆನ್ನಾಗಿ ಹೊಂದುತ್ತದೆ. ಅನ್ನದ ತಪ್ಪಲೆಯಾಗಲಿ, ಹಿಟ್ಟು ಬೇಯಿಸಿದ ಪಾತ್ರೆಯಾಗಲಿ ತೊಳೆಯಲು ಏನು ಉಪಯೋಗಿಸುತ್ತೇವೆ? ತೆಂಗಿನ ಗುಂಜು. ಶರೀರದ ಒಳಗೆ ನಾರು-ಬೇರುಗಳು ಆ ಪಾತ್ರ ವಹಿಸುತ್ತವೆ. ಆದರೆ, ಹಣ್ಣುಗಳು ಬೆರೆಯುವುದಿಲ್ಲ.

ನೈಸರ್ಗಿಕ ನಾರು-ಬೇರು ಶರೀರಕ್ಕೆ ವರ
ಅದಿಲ್ಲದ ಆಹಾರ ತಂದಿದೆ ಆರೋಗ್ಯಕ್ಕೆ ಬರ.

"ವಿಜ್ನಾನ ತನ್ನ ವೈಜ್ನಾನಿಕ ಜ್ನಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ"
- (ಮಸನೋಬು ಪುಕುವೋಕಾ, ಜಪಾನಿನ ಆಧುನಿಕ ಕೃಷಿಋಷಿ.)

"ನೀವು ಖರೀದಿಸುವ ವಿಟಮಿನ್ ಮಾತ್ರೆಗಳು ನಿಮಗೇನೂ ಒಳಿತನ್ನು ಮಾಡುವುದಿಲ್ಲ. ಬದಲಾಗಿ ದುಬಾರಿಯಾದ ಮೂತ್ರವನ್ನು ವಿಸರ್ಜಿಸಲು ಸಹಕಾರಿಯಾಗುತ್ತದೆ."
-(ಮೌಂಟ್ ಸಿನ್ಯಾ ಮೆಡಿಕಲ್ ಸ್ಕೂಲಿನ ಪ್ರೊ.ವಿಕ್ಟರ್ ಹರ್ಬರ್ಟ್.)

'ಎಂಥ ಅನ್ನ ತಿಂದರೆ ಅಂಥ ಬುದ್ಧಿ ಬರುತ್ತದೆ' ಎಂದು ಒಂದು ಸಂಸ್ಕೃತ ಶ್ಲೋಕ ಹೇಳುತ್ತದೆ. ತಿನ್ನುವುದರಲ್ಲಿ ಹಿಡಿತವೇ ಇಲ್ಲದ ತಿಂಡಿಪೋತ ತನ್ನ ಇಂದ್ರಿಯವಿಕಾರಗಳಿಗೆ ಅಡಿಯಾಳಾಗುತ್ತಾನೆ. ನಾಲಗೆಯನ್ನು ಬಿಗಿಹಿಡಿಯಲಾರದವನು ಉಳಿದ ಇಂದ್ರಿಯಗಳನ್ನು ಹೇಗೆ ಬಿಗಿ ಹಿಡಿಯಬಲ್ಲ? ಇದು ನಿಜವಾದರೆ, ಮನುಷ್ಯ ತನ್ನ ದೇಹಪೋಷಣೆಗೆ ಎಷ್ಟು ಬೇಕೋ ಅಷ್ಟೇ ಆಹಾರ ತೆಗೆದುಕೊಳ್ಳಬೇಕು. ಹೆಚ್ಚು ಕೂಡದು. ಆಹಾರ, ಆರೋಗ್ಯವರ್ಧಕವೂ, ಸಮಧಾತುವೂ ಆಗಿರಬೇಕು. ನಾಲಗೆ ಬಯಸಿದುದನ್ನೆಲ್ಲ ತುರುಕಲು ಈ ದೇಹವೇನು ಕಸದ ತೊಟ್ಟಿಯೇ? ಆಹಾರ ದೇಹಪೋಷಣೆಗೆ. ಮನುಷ್ಯನಿಗೆ ದೇಹವನ್ನು ಕೊಟ್ಟಿರುವುದು ಆತ್ಮಸಾಧನೆಗೆ. ಆತ್ಮ ಸಾಧನೆಯೇ ಭಗವಂತನ ಸಾಕ್ಷಾತ್ಕಾರ. ಈ ಸಾಕ್ಷಾತ್ಕಾರ ಯಾರ ಜೀವನದ ಗುರಿಯೋ ಅವರು ಇಂದ್ರಿಯಾಭಿಲಾಷೆಯ ಗುಲಾಮರಾಗುವುದಿಲ್ಲ.
-'ಆರೋಗ್ಯ ರಹಸ್ಯ', ಮಹಾತ್ಮ ಗಾಂಧಿ (ಪುಸ್ತಕದ ಪ್ರಕಾಶಕರು,
ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಕುಮಾರ ಪಾರ್ಕ್ ಪೂರ್ವ,
ಬೆಂಗಳೂರು - ೫೬೦ ೦೦೧)

1 ಕಾಮೆಂಟ್‌:

Amruthavarshini ಹೇಳಿದರು...

Janagalige gothhilada esto vishayagalli ee naru berina vishayavoo ondu. Thumaba Thanks Sir, bahala chenngi arthavaguva rithiyalli helliddiri.

Regards,
Amruthavarshini