ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)
ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು.
ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ.
ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು?
ಒಂದು ದಿನದ ಒಬ್ಬನ ಆಹಾರ :
೧. ಏಕದಳ ಧಾನ್ಯಗಳು ೪೬೦ ಗ್ರಾಂ
೨. ಬೇಳೆಗಳು ೪೦ ಗ್ರಾಂ
೩. ಹಸಿ ತರಕಾರಿಗಳು ೪೦ ಗ್ರಾಂ
೪. ಇತರೆ ತರಕಾರಿಗಳು ೪೦ ಗ್ರಾಂ
೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ
೬. ಹಣ್ಣುಗಳು ೩೦ ಗ್ರಾಂ
೭. ಹಾಲು ೧೫೦ ಗ್ರಾಂ
೮. ಕೊಬ್ಬು ೪೦ ಗ್ರಾಂ
೯. ಬೆಲ್ಲ ೩೦ ಗ್ರಾಂ
ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ.
೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ.
೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು.
೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ.
೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು.
೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ.
ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ 'ಸಿ' ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ.
ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ 'ಬಿ' ಮತ್ತು 'ಸಿ' ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ.
ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ 'ಸೂಪ್'ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ.
ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ
ಕ್ಯಾಲ್ಸಿಯಂ ೧೦.೦೦ ೧೦.೦೦
ಕಬ್ಬಿಣ ೩.೨೦ ೩.೧೦
ಥಯಾಮಿನ್ ೦.೨೧ ೦.೦೬
ರಿಬೋಫ್ಲೇವಿನ್ ೦.೧೬ ೦.೦೬
ನಯಾಸಿನ್ ೩.೯೦ ೧.೯೦
ನಾರು ೦.೬೦ ೦.೨೦
ಥಯಾಮಿನ್, ನಯಾಸಿನ್ ಮುಂತಾದವು ಬಹಳಷ್ಟು ನಾಶವಾಗುತ್ತದೆ. ಗೋಧಿಯ ಹಿಟ್ಟಿನಲ್ಲಿ ಹೊಟ್ಟು ತೆಗೆಯುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ.
ಪೋಷಕಾಂಶಗಳು ಗೋಧಿಯ ಹಿಟ್ಟು ಮೈದಾ ಹಿಟ್ಟು
(೧೦೦ ಗ್ರಾಂ ನಲ್ಲಿ) ಮಿ.ಗ್ರಾಂ ಮಿ. ಗ್ರಾಂ
ಕ್ಯಾಲ್ಸಿಯಂ ೪೧.೦೦ ೨೩.೦೦
ಕಬ್ಬಿಣ ೦.೪೯ ೦.೧೨
ರಂಜಕ ೩೫೫.೦೦ ೧೨೧.೦೦
ನಯಾಸಿನ್ ೪.೩೦ ೨.೪೦
ರಿಬೋಫ್ಲೇವಿನ್ ೦.೧೭ ೦.೦೭
ಥಯಾಮಿನ್ ೦.೪೯ ೦.೧೨
ನಾರಿನ ಅಂಶ ೧.೯೦ ೦.೩೦
ಕರಿಯುವುದು ಹಾಗೂ ಎಣ್ಣೆಯಲ್ಲಿ ಹುರಿಯುವುದು : ಇದರಿಂದ ೪೦% 'ಸಿ', ೭೦% 'ಇ' ಜೀವಸತ್ವಗಳು ನಾಶವಾಗುತ್ತವೆ. ಹೆಚ್ಚಿದ ಹಣ್ಣುಗಳು, ತುರಿದ ತರಕಾರಿಗಳನ್ನು ಹೆಚ್ಚು ವೇಳೆ ಗಾಳಿಯಲ್ಲಿ ಬಿಡಬಾರದು.
ಜೀರ್ಣಕ್ರಿಯೆ
ಗುರುಗಳು : ಬೆಳಗಿನ ತಿಂಡಿ ಏನು?
ಒಂದನೇ ವಿದ್ಯಾರ್ಥಿ : ಚಪಾತಿ, ಸಾಗು
ಎರಡನೇ ವಿದ್ಯಾರ್ಥಿ : ಪೂರಿ, ಪಲ್ಯ
ಮೂರನೇ ವಿದ್ಯಾರ್ಥಿ : ಇಡ್ಲಿ, ಸಾಂಬಾರ್
ನಾಲ್ಕನೇ ವಿದ್ಯಾರ್ಥಿ : ಹಣ್ಣುಗಳು
ಗುರುಗಳು : ಹೀಗೆ, ಬೇರೆ ಬೇರೆ ತಿಂಡಿಗಳನ್ನು ತಿಂದಿದ್ದೀರಿ. ಇವೆಲ್ಲಾ ಹೇಗೆ ರಕ್ತಗತವಾಗುತ್ತವೆ?
ವಿದ್ಯಾರ್ಥಿಗಳು (ಒಟ್ಟಿಗೆ): ನಮಗೆ ಗೊತ್ತಿಲ್ಲಾ ಸಾರ್, ನೀವೇ ತಿಳಿಸಿ.
ಗುರುಗಳು : ಜೀರ್ಣಕ್ರಿಯೆ ನಿಸರ್ಗದ ಒಂದು ಚಮತ್ಕಾರ. ನಾವು ತಿನ್ನುವ ಆಹಾರ ಬಾಯಿಯಿಂದ ಗುದದ್ವಾರದವರೆವಿಗೂ ಪಯಣಿಸುತ್ತದೆ. ಇದರ ಒಟ್ಟು ಉದ್ದ ಮೂವತ್ತಮೂರು ಅಡಿ. ಅನೇಕ ಅಂಗಗಳು ಈ ಕ್ರಿಯಯಲ್ಲಿ ಭಾಗವಹಿಸುತ್ತವೆ. ಆ ಅಂಗಗಳೇ ಅವುಗಳ ಕತೆಯನ್ನು ಹೇಳುತ್ತವೆ, ಕೇಳೋಣ.
ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ
ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು.
ಹಲ್ಲುಗಳು : ಮಕ್ಕಳೇ, ನಿಮಗೆ ನಮ್ಮ ಮೇಲಿರುವಷ್ಟು ಕೋಪ ಬಹುಶಃ ಯಾವ ಅಂಗದ ಮೇಲೂ ಇಲ್ಲವೆಂದು ಕಾಣುತ್ತದೆ. ನೀವು ಚಿಕ್ಕವರಾದಾಗಿನಿಂದಲೂ ಹಲ್ಲುಜ್ಜಿಕೊಳ್ಳುವುದು ಬೇಸರದ ಕೆಲಸ. ನೀವು ಉಪಾಧ್ಯಾಯರಿಂದ ಬೈಸಿಕೊಳ್ಳುವುದೂ ಸಹ ನಮ್ಮಿಂದಲೇ. "ಲೋ! ಏಕೋ ಹಲ್ಲು ಕಿಸಿಯುತ್ತಿ." ಒಟ್ಟಿನಲ್ಲಿ ನಮ್ಮ ಬಗ್ಗೆ ನಿಮಗೆ ಆಸಕ್ತಿ ಕಡಿಮೆ. ನಿಮಗೆ ನಾವು ಜ್ನಾಪಕ ಬರುವುದು ನೀವು ಸೀಬೇಕಾಯಿಯನ್ನು ನೋಡಿದಾಗ ಮಾತ್ರ. ಮುಂದೆ ಯುವಕ, ಯುವತಿಯರಾದ ಮೇಲೆ ನಮ್ಮ ಬಗ್ಗೆ ಕರುಣೆ ಬರುತ್ತದೆ. ಅಷ್ಟರಲ್ಲಿ ಅಚಾತುರ್ಯ ನಡೆದುಹೋಗಿರುತ್ತದೆ. ಹೃದಯ ಮುಂತಾದ ಅಂಗಗಳು ನಿಮ್ಮ ಸಹಾಯವನ್ನು ಹೆಚ್ಚು ಬಯಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಇರುವಿಕೆಗೆ ನಿಮ್ಮ ಸಹಾಯ ಅಗತ್ಯ. ನಿಮ್ಮ ಸಹಾಯಕ್ಕಾಗಿಯೇ ನಾವು ಇದ್ದೇವೆ. ನಾವು ಬಹಳ ಮಾನಧನರು. ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬೇಗ ಜಾಗ ಖಾಲಿ ಮಾಡುತ್ತೇವೆ! ನೀವು ಇನ್ನೂ ಚಿಕ್ಕವರಿದ್ದಾಗ ಹಾಲುಹಲ್ಲುಗಳೆಂಬ ಇಪ್ಪತ್ತು ಹಲ್ಲುಗಳ ಒಂದು ಜೋಡಣೆಯಿತ್ತು. ಅದು ಬಿದ್ದು ಶಾಶ್ವತ ಹಲ್ಲುಗಳಾದ ನಾವು ಹುಟ್ಟಿದೆವು. ಕಡೆಯದಾಗಿ ಬರುವವು ಕಡೆಯ ಎರಡು ದವಡೆಯ ಹಲ್ಲುಗಳು. ಅವಕ್ಕೆ "ಬುದ್ಧಿವಂತ ಹಲ್ಲು' ಗಳೆಂದು ಹೆಸರು (ವಿಸ್ಡಮ್ ಟೀತ್). ಆ ವಯಸ್ಸಿಗೆ ನಿಮಗೆ ಬುದ್ಧಿ ಬಂದಿದೆ ಎಂದು ಅರ್ಥ. ನಿಮಗೆ ಬುದ್ಧಿ ಬಂದಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ! ಒಟ್ಟು ನಾವು ಮೂವತ್ತೆರಡು ಹಲ್ಲುಗಳು. ಕೆಳಗಿನ ಸಾಲಿನಲ್ಲಿ ಹದಿನಾರು, ಮೇಲಿನ ಸಾಲಿನಲ್ಲಿ ಹದಿನಾರು. ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು, ಮುಂತಾಗಿ ನಮ್ಮ ನಮ್ಮ ಕೆಲಸಗಳನ್ನು ಅನುಸರಿಸಿ ನಮಗೆ ಹೆಸರುಗಳನ್ನು ಇಟ್ಟಿದ್ದಾರೆ. ಆಹಾರವನ್ನು ಹರಿಯಲು, ಕಡಿಯಲು, ಸಿಗಿಯಲು, ಅರೆಯಲು ಬೇರೆ ಬೇರೆ ಹಲ್ಲುಗಳೇ ಅವಶ್ಯ. ಕೋರೆಯ ಹಲ್ಲಿಗೆ 'ಕಣ್ಣು ಹಲ್ಲು' (ಐ ಟೀತ್) ಎಂದೂ ಕರೆಯುತ್ತಾರೆ. ಅದು ಕಣ್ಣಿನವರೆಗೂ ಹೋಗಿದೆಯೆಂದು ಹಿಂದಿನವರು ನಂಬಿದ್ದರು. ಅದು ತುಂಬಾ ಆಳಕ್ಕೆ ಇಳಿದಿದೆಯೆಂಬುದು ನಿಜವೇ. ನಾವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿದ್ದೇವೆ. ಆದ್ದರಿಂದಲೇ ಕ್ಯಾಲಿಯಂ ಮತ್ತು ರಂಜಕಯುಕ್ತವಾದ ಆಹಾರವನ್ನು ನೀವು ಹೆಚ್ಚಿಗೆ ಸೇವಿಸಬೇಕು. ಅವುಗಳು ಯಾವುದರಲ್ಲಿರುತ್ತವೆನ್ನುವುದನ್ನು ಆಗಲೇ ಹೇಳಿಯಾಗಿದೆ. ನಮ್ಮ ಮೇಲಿರುವ ಮೊದಲನೆಯ ಪರೆ ಎನಾಮಲ್, ಅದರ ಹಿಂದಿರುವುದೇ ಡೆಂಟೈನ್. ಇದು ಪೂರ್ತಿ ಮೂಳೆಯಿಂದಲೇ ಆಗಿದೆ. ಈ ಡೆಂಟೈನ್ ನ ಹಿಂದೆ ಮೃದುವಾದ ಭಾಗವಿದೆ. ಅಲ್ಲಿ ನರಗಳು, ರಕ್ತನಾಳಗಳು ಎಲ್ಲವೂ ಇವೆ. ನೀವು ದಿನಕ್ಕೆ ಎರಡು ಸಲ ಬೇಕಾಬಿಟ್ಟಿಯಾಗಿ ಉಜ್ಜಿ ಬಹಳ ಶುಚಿಯಾಗಿಟ್ಟುಕೊಂಡಿರುವೆವು ಎಂದು ಭಾವಿಸಿದ್ದೀರಿ. ಬಾಯಿ, ಅಣುಗಳ ಅಕ್ಷಯಸಾಗರ. ಉಳಿದ ಆಹಾರದ ಕಣಗಳ ಮೇಲೆ ಬ್ಯಾಕ್ಟೀರಿಯಾಗಳ ಧಾಳಿಯಿಂದ ಒಂದು ಪೊರೆಯುಂಟಾಗುತ್ತದೆ. ಅದನ್ನು ಫ್ಲೇಕ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಆಹಾರದ ಕಣಗಳು ಕೊಳೆತು ಆಮ್ಲತೆಯುಂಟಾಗುತ್ತದೆ. ಈ ಆಮ್ಲ ಎನಾಮಲ್ ಅನ್ನು ಕರಗಿಸುತ್ತದೆ. ಇದು ಸಿಹಿ ಬಾಯಿಗೂ ಕಾರಣವಾಗುತ್ತದೆ. ಅಂದರೆ ತಿಂದ ಸಿಹಿ ಪದಾರ್ಥಗಳ ಕಣಗಳು ಬಾಯಿಯಲ್ಲಿ ಉಳಿದರೆ ಅದು ಬಾಯಿಯಲ್ಲಿಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಅನುಕೂಲವಾಗುತ್ತದೆ. ಕಣ್ಣಿಗೆ ಕಾಣದ ಫ್ಲೇಕ್(ಪ್ಲೇಕ್) ಜೊಲ್ಲಿನಲ್ಲಿರುವ ಲವಣಗಳನ್ನು ತೆಗೆದುಕೊಂಡು ಬಹಳ ಗಟ್ಟಿಯಾದ 'ಟಾರ್ ಟಾರ್' ಎಂಬ ವಸ್ತುವನ್ನು ತಯಾರಿಸಿ ಸಂದುಗಳಲ್ಲಿ ಕಟ್ಟುವಂತೆ ಮಾಡುತ್ತದೆ. ನೀವು ಮಧ್ಯವಯಸ್ಕರ ಹಲ್ಲಿನಲ್ಲಿ ಕರಿಯಬಣ್ಣದ ಈ ಟಾರ್ ಟಾರ್ ಕಟ್ಟಿರುವ ಹಲ್ಲುಗಳನ್ನು ನೋಡಿರಬಹುದು. ಇದು ನಮ್ಮ ಅಡಿಪಾಯವಾದ ವಸಡನ್ನು ನಮ್ಮಿಂದ ಬೇರ್ಪಡಿಸಿಬಿಡುತ್ತದೆ.
ನಾವು ನಿಮ್ಮ ಶರೀರವೆಂಬ ಮನೆಯ ಕಾಂಪೌಂಡಿನ ಗೇಟಿನಂತೆ. ನಿಮ್ಮ ಶರೀರದ ಆರೋಗ್ಯ, ನಿಮ್ಮ ಸೌಂದರ್ಯ ಎಲ್ಲವೂ ನಮ್ಮನ್ನು ಅವಲಂಬಿಸಿವೆ. ನಾವು 'ಉಪಯೋಗಿಸು, ಇಲ್ಲದಿದ್ದರೆ ಕಳೆದುಕೋ' (ಯೂಸ್ ಆರ್ ಲೂಸ್) ಎಂಬ ತತ್ವಕ್ಕೆ ಬದ್ಧರು. ನೀವು ನಮ್ಮನ್ನು ಉಪಯೋಗಿಸದಿದ್ದರೆ ಕಳೆದುಕೊಳ್ಳುತ್ತೀರಿ. ನಮ್ಮನ್ನು ಕಳೆದುಕೊಂಡರೆ ಗೇಟಿಲ್ಲದ ಮನೆಯಂತೆ, ಯಾವುದೇ ದನವಾದರೂ ನುಗ್ಗೀತು ಎಚ್ಚರಿಕೆ!
ಮಕ್ಕಳೇ! ಗ್ರ್‍ಐಂಡರ್ ನೋಡಿದ್ದೀರಾ ? ಅದು ಹೇಗೆ ಕೆಲಸ ಮಾಡುತ್ತದೆ. ಅರೆಯುತ್ತದೆ. ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಬಿದ್ದರೆ ಮಾತ್ರ ಚೆನ್ನಾಗಿ ನುರಿಸಬಲ್ಲದು. ಹಾಗೆಯೇ ಬಾಯಿಯಲ್ಲಿನ ಲಾಲಾಗ್ರ್‍ಅಂಥಿಗಳು ಸ್ವಲ್ಪಸ್ವಲ್ಪವೇ ಲಾಲಾರಸವನ್ನು ಸುರಿಸಿ ನಾವು ಆಹಾರವನ್ನು ನುರಿಸಲು ಸಹಾಯ ಮಾಡುವುವು. ಆಹಾರ ಜೀರ್ಣವಾಗಲು ಕಿಣ್ವಗಳು (ಎಂಜ಼ೈಮ್) ಬೇಕೇಬೇಕು. ಜೊಲ್ಲು ರಸದಲ್ಲಿನ ಕಿಣ್ವ ಟಯಲಿನ್. ಈ ಕಿಣ್ವವು ಪಿಷ್ಟಪದಾರ್ಥವನ್ನು ಜಂಟಿ ಸಕ್ಕರೆಯಾದ ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ. ಈ ಕ್ರಿಯೆಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಆಹಾರದಲ್ಲಿರುವ ಸಸಾರಜನಕ ಮತ್ತು ಮೇದಸ್ಸು ನನ್ನಿಂದ ಸಣ್ಣ ಸಣ್ಣ ಕಣಗಳಾಗಿ ಒಡೆಯಲ್ಪಡುತ್ತವೆ. ಆದರೆ ಅವುಗಳ ಜೀರ್ಣಕ್ರಿಯೆ ಬಾಯಿಯಲ್ಲಿ ಪ್ರಾರಂಭವಾಗುವುದಿಲ್ಲ. ಅದಕ್ಕೆ ಬೇಕಾದ ವಾತಾವರಣವಾಗಲಿ, ಕಿಣ್ವವಾಗಲಿ ನನ್ನಲ್ಲಿಲ್ಲ.
ಘನಾಹಾರ ದ್ರವರೂಪವನ್ನು ಪಡೆದು ನಿಧಾನವಾಗಿ ಅನ್ನನಾಳದ ಮುಖಾಂತರ ಜಠರಕ್ಕೆ ಒಯ್ಯಲ್ಪಡುತ್ತದೆ. ಈ ಕ್ರಿಯೆ ಒಮ್ಮೆಗೇ ಆಗುವುದಿಲ್ಲ. ಸ್ವಲ್ಪ, ಸ್ವಲ್ಪವೇ ನೂಕಲ್ಪಟ್ಟು ಜಠರವನ್ನು ಸೇರುತ್ತದೆ. ಮುಂದಿನದು ಜಠರದ ಕೆಲಸ.
ಜಠರ :
ಮನುಷ್ಯ ನನಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಬಹುಶಃ ಶರೀರದ ಯಾವ ಅಂಗಕ್ಕೂ ಕೊಟ್ಟಿಲ್ಲ. ಅದಕ್ಕೇ ಅನೇಕ ಗಾದೆಗಳು. "ಎಲ್ಲಾ ಮಾಡುವುದು ಹೊಟ್ಟೆಗಾಗಿ" "ಜಠರ-ದೇಹದ ಕಮ್ಮಟ". "ಜಠರ-ಹೋಟೆಲಿದ್ದಂತೆ-ಬರುವವರೂ ಹೋಗುವವರೂ ಸದಾ ಇರುತ್ತಾರೆ." ನನ್ನನ್ನು ಮೊದಲು ಸಾಮಾನ್ಯವಾಗಿ ಹೊಗಳುವವರೇ ಹೆಚ್ಚು. ಕಡೆಗೆ ಹೇಳುತ್ತಾರೆ, "ಅಯ್ಯೋ! ಹೊಟ್ಟೆ! ನಿನ್ನನ್ನು ನಂಬಿ ನಾ ಕೆಟ್ಟೆ." ಇವರನ್ನು ಕೆಡಿಸುವುದು ನನ್ನ ಉದ್ದೇಶ್ಯವಲ್ಲ. ನಿಜವಾಗಿ ಅವರೇ ನನ್ನನ್ನು ಕೆಡಿಸುತ್ತಾರೆ. ಹೊರಗೆ ಕಾಣುವ ಹೊಟ್ಟೆ ನಾನಲ್ಲ, ಅದರೊಳಗಿನ ಬೆಲೂನಿನಂತಹ ಒಂದು ಅಂಗ ನಾನು. ನನ್ನ ಶಕ್ತಿ ಸಾಮಾನ್ಯವಾಗಿ ೨ ಲೀಟರ್ ವಸ್ತು ಹಿಡಿಸುವಷ್ಟು. ನೀವು ಅದಕ್ಕಿಂತ ಜಾಸ್ತಿ ತುರುಕುತ್ತೀರಿ ಅನ್ನುವ ವಿಷಯ ಬೇರೆ. ನಾನು ಸ್ಥಿತಿಸ್ಥಾಪಕತೆಯಿರುವ ಮಾಂಸದ ಚೀಲ. ನನ್ನಲ್ಲಿ ಹಲ್ಲುಗಳಿಲ್ಲ. ಹಲ್ಲುಗಳನ್ನು ಉಪಯೋಗಿಸಿ ಆಹಾರವನ್ನು ನುರಿಸಿದ್ದರೆ ನನಗೆ ನೀವು ಉಪಕಾರ ಮಾಡಿದಂತಾಗುತ್ತದೆ. ಆಹಾರವನ್ನು ನಾನು ಕಡೆಯುತ್ತೇನೆ. ಅದರಿಂದ ಕೊಂಚ ನುರಿಸಿ ಆಹಾರವನ್ನು ದ್ರವರೂಪಕ್ಕೆ ತರಬಲ್ಲೆ. ನನ್ನ ಪದರದಲ್ಲಿರುವ ಅನೇಕ ಗ್ರಂಥಿಗಳು ಸುಮಾರು ೩ ಲೀಟರ್ ನಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಸುತ್ತವೆ. ನನ್ನಲ್ಲಿ ತಯಾರಾಗುವ ಕಿಣ್ವ ಪೆಪ್ಸಿನ್. ಇದು ಪ್ರೊಟೀನನ್ನು ಪಾಲಿಪೆಪ್ ಟೈಡ್ ಎಂಬ ರೂಪಕ್ಕೆ ಒಡೆಯುತ್ತದೆ. ಬಾಯಿಯಲ್ಲಿ ಪ್ರಾರಂಭವಾಗದಿದ್ದ ಸಸಾರಜನಕದ ಜೀರ್ಣಕ್ರಿಯೆ ಇಲ್ಲಿ ಪ್ರಾರಂಭವಾಗುವ ರೀತಿ ಇದು. ನನ್ನ ಮಾಂಸಖಂಡಗಳ ತರಂಗದಂತಹ ಕ್ರಿಯೆಯಿಂದ ಆಹಾರವು ನುಣ್ಣಗೆ ದೋಸೆಯ ಹಿಟ್ಟಿನಂತಾಗುತ್ತದೆ. ಆಹಾರ ೩-೪ ಗಂಟೆಗಳ ಕಾಲ ನನ್ನಲ್ಲಿ ಉಳಿಯುತ್ತದೆ. ಎಣ್ಣೆಯಲ್ಲಿ ಕರಿದ, ರುಚಿರುಚಿಯಾದ ಬೆಳಗಿನ ತಿಂಡಿ ಪೂರಿಯನ್ನು ಊಟದ ಹೊತ್ತಾದರೂ ನನ್ನಿಂದ ಅರಗಿಸಲು ಸಾಧ್ಯವಿಲ್ಲ. ನನಗೆ ತೊಂದರೆ ಕೊಡುವ ಮತ್ತೊಂದು ವಸ್ತು ಐಸ್ ಕ್ರೀಂ. ಅದು ನನ್ನ ಶಾಖವನ್ನು ಒಮ್ಮೆಗೆ ೯೯ಡಿಗ್ರಿ 'ಎಫ್' ನಿಂದ ೨೦ಡಿಗ್ರಿ 'ಎಫ್' ಗೆ ಇಳಿಸಿಬಿಡುತ್ತದೆ. ಇದರಿಂದ ನನ್ನ ಕೆಲಸ ತಣ್ಣಗಾಗುತ್ತದೆ, ಅಂದರೆ ನಿಂತು ಹೋಗುತ್ತದೆ. ಮಕ್ಕಳೇ, ಐಸ್ ಕ್ರೀಂ ತಿನ್ನುವ ಮುಂಚೆ ಕೊಂಚ ಯೋಚಿಸಿ!
ಹಸಿಯ ಮಾಂಸವನ್ನೇ ಬೇಕಾದರೂ ಕರಗಿಸುವ ನಾನು ಖಾಲಿಯಾಗಿದ್ದರೆ ನನ್ನನ್ನೇ ತಿಂದು ಬಿಡುವುದಿಲ್ಲವೇ? ಇದು ಬಹಳ ಜನರ ಆತಂಕ. ನನ್ನ ಪದರದಲ್ಲಿರುವ ಆಮ ನನ್ನನ್ನು ರಕ್ಷಿಸುತ್ತದೆ. "ನನಗೆ ಆಮಶಂಕೆಯಾದಾಗ ಹೊರಕ್ಕೆ ಹೋಗುತ್ತದಲ್ಲ, ಆ ಆಮವೇ?" ಹೌದು, ಅದೇ ಆಮ. ಆದರೆ ಆಮಶಂಕೆಯಲ್ಲಿ ಹೆಚ್ಚಾದ ಆಮ ಹೊರಕ್ಕೆ ಹೋಗುತ್ತದೆ. ನನ್ನಲ್ಲಿ ಉತ್ಪತ್ತಿಯಾಗುವ ಅಥವ ಬಂದು ಸೇರುವ ಕಿಣ್ವಗಳು, ಪೆಪ್ಸಿನ್, ರೆನಿನ್, ಮತ್ತು ಲಿಪೇಸ್.
ಮನುಜನ ಮುಖದಲ್ಲಾಗುವ ಬದಲಾವಣೆಗನುಗುಣವಾಗಿ ನನ್ನ ಬದಲಾವಣೆಯಾಗುತ್ತದೆ. ಮುಖದ ಬಣ್ಣ ಕೆಂಪಾದರೆ ನಾನು ಕೆಂಪಗಾಗುತ್ತೇನೆ. ಮುಖ ಮಂಕಾದರೆ ನಾನೂ ಮಂಕು. ಮನುಷ್ಯನ ಮನಸ್ಸಿನ ಒತ್ತಡ, ಖಿನ್ನತೆ ಎಲ್ಲವೂ ನನ್ನಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ. ಸಾಸುವೆ, ಉರಿಯುವಂತೆ ಮಾಡುತ್ತದೆ. ಅದಕ್ಕಿಂತ ಹೆಚ್ಚು ಮೆಣಸು ಉರಿಸುತ್ತದೆ. ಮೆಣಸಿನಕಾಯಿ ಉರಿ ಊತವನ್ನೇ ತರುತ್ತದೆ. ಕರಿದ ಮೆಣಸಿನಕಾಯಿ ಬಜ್ಜಿಯನ್ನು ತಿನ್ನುವಾಗ ನನ್ನ ಸ್ಥಿತಿಯನ್ನು ಜ್ನಾಪಿಸಿಕೋ. ಕಾಫಿ, ಟೀ, ಆಲ್ಕೋಹಾಲ್ ಎಲ್ಲವೂ ಆಮ್ಲತೆಯನ್ನು ಹೆಚ್ಚಿಸುತ್ತವೆ. ಇದೇ ಗುಂಪಿಗೆ ಔಷಧವೂ ಸೇರುತ್ತದೆ. ನನಗೆ ಗೌರವ ಕೊಟ್ಟು ತೊಂದರೆಯಿಲ್ಲದೇ ನೋಡಿಕೊಂಡರೆ ನಾನೂ ತೊಂದರೆ ಕೊಡದೆ ಸೇವೆ ಸಲ್ಲಿಸುತ್ತೇನೆ. ಮೊದಲು ನಾನು ಸಣ್ಣಗೆ ನೋವುಂಟುಮಾಡಿ ನನ್ನ ತೊಂದರೆಯನ್ನು ಹೇಳಿಕೊಳ್ಳುತ್ತೇನೆ. ಅದಕ್ಕೆ ಲಕ್ಷಕೊಡದೆ ಆ ನೋವನ್ನು ನಿರ್ಲಕ್ಷಿಸಿ, ನೋವುಶಮನ ಮಾತ್ರೆಯನ್ನು ನುಂಗಿ, ನನ್ನ ಶಕ್ತಿಗೆ ಮೀರಿ ಆಹಾರವನ್ನು ಸದಾ ತುರುಕುತ್ತಿದ್ದರೆ, ನಾನು ಬಿರುಕುಬಿಡಲು ಪ್ರಾರಂಭಿಸುತ್ತೇನೆ. ನೋವು ನಿತ್ಯದ ನಿಯಮವಾಗುತ್ತದೆ.
ಡಿಯೋಡಿನಂ :
ಆ ದೊಡ್ಡ ಜಠರದಿಂದ ಸಣ್ಣಕರುಳಿನ ಮಧ್ಯಭಾಗದಲ್ಲಿ ಸಿಕ್ಕಿ ನಜ್ಜುಗುಜ್ಜಾಗುತ್ತಿರುವ ಹತ್ತು ಅಂಗುಲ ಉದ್ದದ ಸಣ್ಣ ಅಂಗವೇ ನಾನು. ಜಠರದಲ್ಲಿ ದ್ರವರೂಪಕ್ಕೆ ಬಂದ ಆಹಾರ, ಅದಕ್ಕೆ ಚೈಮ್ ಎನ್ನುತ್ತಾರೆ, ಇದು ಪೈಲೋರಿಕ್ ಸ್ಪಿಂಕ್ ಸ್ಟರ್ ಮೂಲಕ ನನ್ನಲ್ಲಿಗೆ ಬರುತ್ತದೆ. ಅದಿಲ್ಲದಿದ್ದರೆ ಆ ದ್ರವದ ಜತೆಯಲ್ಲಿ ಆಮ್ಲವೂ ಸಹ ನುಗ್ಗಿಬಿಡುತ್ತಿತ್ತು. ಹಾಗಾಗಿದ್ದರೆ ನಾನು ಸತ್ತೇಹೋಗುತ್ತಿದ್ದೆ. ಆದ್ದರಿಂದ ನಿಧಾನವಾಗಿ ಆಹಾರವು ಮಾತ್ರ ನನ್ನಲ್ಲಿಗೆ ತಳ್ಳಲ್ಪಡುತ್ತದೆ. ನನ್ನಲ್ಲಿ ಮೇದೋಜೀರಕಗ್ರ್‍ಅಂಥಿಯಿಂದ ಬಂದ ಮೇದೋಜೀರಕ ರಸ, ಪಿತ್ತಕೋಶದಿಂದ ಬಂದ ಪಿತ್ತ ರಸ, ಇವೆಲ್ಲವೂ ಸೇರುತ್ತವೆ. ಬಾಯಿಯಲ್ಲಿ, ಜಠರದಲ್ಲಿ ಜೀರ್ಣವಾಗದೇ ಉಳಿದಿದ್ದ ಆಹಾರ ನನ್ನಲ್ಲಿ ಜೀರ್ಣವಾಗಲು ಪ್ರಾರಂಭವಾಗುವುದು. ನನ್ನಲ್ಲಿ ಪಚನಕ್ರಿಯೆ ಕ್ಷಾರಮಾಧ್ಯಮದಲ್ಲಿ ಮುಖ್ಯವಾಗಿ ಮೇದಸ್ಸಿನ ಜೀರ್ಣಕ್ರಿಯೆಯ ಪ್ರಾರಂಭ.
ಮೇದೋಜೀರಕಗ್ರ್‍ಅಂಥಿ :
ನಾನು ನಿನ್ನ ಮೇದೋಜೀರಕ ಗ್ರ್‍ಅಂಥಿ. ನನ್ನ ಬಣ್ಣ ಕಂದು ಕೆಂಪು(ಗ್ರ್‍ಏ ಪಿಂಕ್), ತೂಕ ೮೫ ಗ್ರಾಂ. ನಾನು ನಿನ್ನ ಹೊಟ್ಟೆಯ ಅಂತರಾಳದಲ್ಲಿದ್ದೇನೆ. ಜಠರದ ಕೆಳಗೆ ಡಿಯೋಡಿನಂ ಗೆ ಹೊಂದಿಕೊಂಡು, ಅನೇಕ ಅಂಗಗಳ ಮಧ್ಯೆ ಹುದುಗಿ ಹೋಗಿದ್ದೇನೆ. ನಾಯಿಯ ನಾಲಗೆಯಷ್ಟು, ಸುಮಾರು ೧೫ ಸೆಂ.ಮಿ. ಉದ್ದವಾಗಿದ್ದೇನೆ. ನನ್ನ ಇರುವಿಕೆಯ ಅರಿವು ನಿನಗಿಲ್ಲ. ನನ್ನ ಪ್ರಾಮುಖ್ಯತೆಯೂ ನಿನಗೆ ಗೊತ್ತಿಲ್ಲ. ಡಾಕ್ಟರ್ ನಿನಗೆ ಸಕ್ಕರೆ ಕಾಯಿಲೆಯಿದೆ ಎಂದು ಹೇಳಿದಾಗ ನೀನು ನನ್ನ ಬಗ್ಗೆ ಮಾಹಿತಿ ಸಂಗ್ರಹಣೆಗೆ ಪ್ರಯತ್ನಿಸುವಿಯೆಂದು ಕಾಣುತ್ತದೆ. ಹಾಗಾಗದಿರಲಿ ಎಂದು ನನ್ನ ಅಪೇಕ್ಷೆ. ಹಾಗಾಗದಿರಲು ನೀನು ನನ್ನ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಅವಶ್ಯ. ನಾನು ಸದಾ ಚಟುವಟಿಕೆಯಿಂದ ಕೂಡಿದ ಅಂಗ. ನಾನು ಅದನ್ನು ಕಡಿಮೆ ಮಾಡಿದರೆ ನಿನಗೆ ಸುಸ್ತು ಪ್ರಾರಂಭ. ನನ್ನಲ್ಲಿ ಎರಡು ವಿಧವಾದ ರಸಗಳು ಉತ್ಪತ್ತಿಯಾಗುತ್ತವೆ. ಮೊದಲನೆಯದು ಹಾರ್ಮೋನ್, ಎರಡನೆಯದು ಕಿಣ್ವ. ಸುಮಾರು ೯೦೦ ಗ್ರಾಂ ರಸಗಳು ನನ್ನಲ್ಲಿ ಉತ್ಪತ್ತಿಯಾಗುತ್ತವೆ. ೮೫ ಗ್ರಾಂ ಗ್ರ್‍ಅಂಥಿಯಿಂದ ೯೦೦ ಗ್ರಾಂ ರಸ! ನಿನಗೆ ಆಶ್ಚರ್ಯವಾಗುವುದಿಲ್ಲವೇ ? ಜಠರವನ್ನು ಬಿಟ್ಟ ಚೈಮ್ ಆಮ್ಲೀಯ ಗುಣ ಉಳ್ಳದ್ದು. ಡಿಯೋಡಿನಂ ಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಇದನ್ನು ಆಗಲೇ ತಿಳಿಸಿರಬೇಕು. ಆ ಪ್ರತ್ಯಾಮ್ಲೀಯ ವಾತವರಣವನ್ನು ಸೃಷ್ಟಿಸುವ ಕ್ರಿಯೆ ನನ್ನದು. ಮತ್ತೊಂದು ಮುಖ್ಯ ಕ್ರಿಯೆ ನಾನು ಸುರಿಸುವ ಕಿಣ್ವಗಳು. ಮೊದಲನೆಯದು ಟ್ರೈಪ್ಸಿನ್. ಇದು ಸಸಾರಜನಕವಸ್ತುಗಳನ್ನು ಅಮೈನೋಆಮ್ಲವಾಗಿ ಒಡೆಯುತ್ತದೆ. ಈ ಸ್ಥಿತಿಯಲ್ಲಿ ಮಾತ್ರ ರಕ್ತ ಸಸಾರಜನಕವನ್ನು ತನ್ನದಾಗಿಸಿಕೊಳ್ಳಬಲ್ಲದು. ಇದು ನಿನಗೆ ಆಗಲೇ ಗೊತ್ತಿದೆ. ಮತ್ತೊಂದು ಕಿಣ್ವ ಅಮೈಲೇಸ್, ಇದು ಪಿಷ್ಠವನ್ನು ಸಕ್ಕರೆಯನ್ನಾಗಿ(ಗ್ಲೂಕೋಸ್) ಪರಿವರ್ತಿಸುತ್ತದೆ. ಮೂರನೆಯದು ಹಾಗೂ ಬಹು ಮುಖ್ಯವಾದದ್ದು ಲಿಪೇಸ್. ಇದು ಮೇದಸ್ಸಿನ ಕಣಗಳನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರೀನ್ ಆಗಿ ಒಡೆಯುತ್ತದೆ. ಹೀಗೆ ಮೂರು ರೀತಿಯ ಆಹಾರ ದ್ರವ್ಯಗಳನ್ನೂ ರಕ್ತಗತವಾಗುವ ಹಂತಕ್ಕೆ ತಂದು ಬಿಡುವುದು ನನ್ನ ಕೆಲಸ. ನಾಲಗೆಯ ಚಪಲಕ್ಕೆ ನೀನು ತಿಂದ ಅನೇಕ ಆಹಾರಗಳನ್ನು ರಕ್ತಗತ ಮಾಡಲು ಅನೇಕ ಅಂಗಗಳು ನಿನಗೆ ಅರಿವಿಲ್ಲದಂತೆ ಶ್ರಮಿಸುತ್ತಿವೆ. ಅಂತಹವುಗಳಲ್ಲಿ ನಾನೂ ಒಂದು.
ಮೇಲಿನ ಕೆಲಸಗಳ ಜೊತೆಗೆ ಅತಿ ಮುಖ್ಯವಾದ ಕೆಲಸವೊಂದಿದೆ. ಅದೇ ಇನ್ಸುಲಿನ್ ತಯಾರಿಕೆ. ಇದು ಒಂದು ಹಾರ್ಮೋನ್. ನಿನ್ನ ಶರೀರದಲ್ಲಿ ಕೋಟ್ಯಾಂತರ ಕೋಶಗಳಿವೆ. ಒಂದೊಂದೂ ಜೀವಕೋಶವೂ ಒಂದೊಂದು ರೈಲ್ವೆ ಎಂಜಿನ್ನಿನಂತೆ. ಇಂಜನ್ನಿನ ಚಾಲನೆಗೆ ಅದರಲ್ಲಿ ಕಲ್ಲಿದ್ದಲು ಉರಿಯಬೇಕು. ಒಂದು ಕಡೆ ಕಲ್ಲಿದ್ದಲಿದೆ. ಮತ್ತೊಂದು ಕಡೆ ಇಂಜಿನ್ನಿದೆ. ಇಂಜಿನ್ನು ತಾನೇ ಅದನ್ನು ತೆಗೆದುಕೊಳ್ಳಲಾರದು. ಮಧ್ಯೆ ಒಬ್ಬ ಕೋಲ್ಮನ್ ಬೇಕು. ಒಂದು ಕಡೆ ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಇದೆ. ಮತ್ತೊಂದೆಡೆ ಜೀವಕೋಶವಿದೆ. ಸಕ್ಕರೆ ಜೀವಕೋಶಕ್ಕೆ ತಲುಪಬೇಕು. ಜೀವಕೋಶ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳಲಾರದು. ಒಬ್ಬ ಮಧ್ಯಸ್ಥಗಾರ (ಕೋಲ್ಮನ್ ರೀತಿ) ಬೇಕು. ಅದೇ ಇನ್ಸುಲಿನ್. ನನ್ನಲ್ಲಿ ಇನ್ಸುಲಿನ್ ತಯಾರಿಕೆ ಕಡಿಮೆಯಾದರೆ ಆಗ ರಕ್ತದಲ್ಲಿರುವ ಗ್ಲೂಕೋಸ್ ಜೀವಕೋಶವನ್ನು ಸೇರಲಾರದು. ಆ ಗ್ಲೂಕೋಸ್ ಶರೀರದಲ್ಲಿಯೇ ಉಳಿದರೆ ಶರೀರಕ್ಕೆ ಹಾನಿ. ಅದಕ್ಕಾಗಿ ಅದನ್ನು ಮೂತ್ರಜನಕಾಂಗಗಳು ಹೊರಕ್ಕೆ ಹಾಕಿಬಿಡುತ್ತವೆ. ಇದೇ ಸಕ್ಕರೆಯ ಖಾಯಿಲೆ. ಇನ್ನೂ ಹೆಚ್ಚಾದಲ್ಲಿ ರಕ್ತದಲ್ಲಿಯೇ ಉಳಿದುಬಿಡುತ್ತದೆ. ಇದರಿಂದ ಇನ್ನೂ ತೊಂದರೆ ಹೆಚ್ಚು.
ನನ್ನಲ್ಲಿ ಸಾಕಾಗುವಷ್ಟು ಇನ್ಸುಲಿನ್ ಇದೆ. ಆಗ ಏನಾಗುತ್ತದೆ ಕೊಂಚ ನೋಡುವ. ನಿನಗೆ ಅನ್ನ, ಚಪಾತಿ, ಹಿಟ್ಟು ಅಂದರೆ ಬಹಳ ಪ್ರೀತಿಯಲ್ಲವೇ? ನಿತ್ಯದ ನಿನ್ನ ಆಹಾರದಲ್ಲಿ ಇವಕ್ಕೇ ಮುಖ್ಯ ಪಾತ್ರ. ಅಕ್ಕಿಯೇ ಆಗಲಿ, ಗೋಧಿಯೇ ಆಗಲಿ, ರಾಗಿಯೇ ಆಗಲಿ ಕಡೆಗೆ ಗ್ಲೂಕೋಸ್ ಆಗಿಯೇ ರಕ್ತ ಸೇರಬೇಕು. ನೀನು ಎಷ್ಟು ಹೆಚ್ಚು ಈ ಗುಂಪಿನ ಆಹಾರ ಸೇವಿಸುವೆಯೋ ಅಷ್ಟು ಹೆಚ್ಚು ಗ್ಲೂಕೋಸ್ ರಕ್ತಕ್ಕೆ ಸೇರುತ್ತದೆ. ಅದನ್ನು ಜೀವಕೋಶದಲ್ಲಿ ಉರಿಸುವುದು ಇನ್ಸುಲಿನ್ ನ ಕೆಲಸ. ಎಲ್ಲವನ್ನೂ ಒಮ್ಮೆಯೇ ಉಪಯೋಗಿಸಿಬಿಡುವುದು ಬುದ್ಧಿವಂತಿಕೆಯೇ? ಮುಂದೆ ನಿನಗೆ ಅವಶ್ಯಕತೆ ಬಿದ್ದಾಗ ಬೇಕಾಗುತ್ತದೆ. ಅದಕ್ಕಾಗಿ ಆ ಹೆಚ್ಚಾದ ಗ್ಲೂಕೋಸನ್ನು ಗ್ಲೈಕೋಜಿನ್ ಮತ್ತು ಮೇದಸ್ಸಿನ ರೂಪಕ್ಕೆ ಪರಿವರ್ತಿಸಿ ಪಿತ್ತಕೋಶದಲ್ಲಿ ಶೇಖರಿಸುವ ಕೆಲಸವೂ ಸಹ ಇನ್ಸುಲಿನ್ನಿನದೇ. ನೀನು ಉಪವಾಸಮಾಡಿದಾಗ, ನಿನಗೆ ಅವಶ್ಯಕತೆಯುಂಟಾದಾಗ ಅದನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಕೊಡುವುದನ್ನೂ ಸಹ ಈ ಇನ್ಸುಲಿನ್ ನಿರ್ವಹಿಸುತ್ತದೆ. ಪಿತ್ತಕೋಶದಲ್ಲಿ ಸಂಗ್ರಹಿಸಿಡುವುದಕ್ಕಿಂತಲೂ ಹೆಚ್ಚು ಗ್ಲೂಕೋಸ್ ತಯಾರಾದರೆ ಅದನ್ನು ಮಾಂಸಖಂಡಗಳಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಿಸಿಡುವುದೂ ಸಹ ಇನ್ಸುಲಿನ್. ಬರೀ ಪಿಷ್ಟವಷ್ಟೇ ಅಲ್ಲ, ನೀನು ತಿನ್ನುವ ಕೊಬ್ಬನ್ನು ಸಹ ಇದೇ ಕರಗಿಸಬೇಕನ್ನ. ನನ್ನ ಹೆಸರೇ ಸೂಚಿಸುವಂತೆ ಮೇದಸ್ಸನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಗ್ರಂಥಿಯಾಗಿರುವುದರಿಂದಲೇ ನಾನು ಮೇದೋಜೀರಕ ಗ್ರಂಥಿ. ಸಸಾರಜನಕದ ಜೀರ್ಣಕ್ರಿಯೆಯಲ್ಲಿಯೂ ಸಹ ಇನ್ಸುಲಿನ್ ನ ಪಾತ್ರವಿದೆ. ನಿನಗೆ ಇಷ್ಟೊಂದು ಉಪಯುಕ್ತವಾದ ಇನ್ಸುಲಿನ್ ತಯಾರಿಸುವ ಪುಟ್ಟ ಗ್ರಂಥಿ ನಾನೇ. ನನ್ನ ಬಗ್ಗೆ ಕೊಂಚ ಕರುಣೆಯನ್ನು ತೋರಿಸಲಾರೆಯಾ ? ಇಲ್ಲದಿದ್ದರೆ ಡಯಾಬಿಟಿಸ್ !
ಪಿತ್ತಕೋಶ :
'ನಾನು ನಿನ್ನ ಲಿವರ್' (ಪಿತ್ತಜನಕಾಂಗ)
'ನನಗೆ ಫೀವರ್ ಅಂದರೆ ಗೊತ್ತು ಆದರೆ ಈ ಲಿವರ್ ಅಂದರೇನೆಂದು ಗೊತ್ತೇ ಇಲ್ಲವೇ'!
'ಫೀವರ್ ಒಂದು ಕಾಯಿಲೆ, ನಾನು ನಿನ್ನ ಒಳಗಿರುವ ಒಂದು ಅಂಗ. ಮೊನ್ನೆ ನಿನಗೆ ವಾಂತಿ ಆಯ್ತಲ್ಲ ಎಂತಹ ಅನಾಹುತವಾಯ್ತು.'
'ಬರೀ ಕಹಿ, ಹಳದಿ ಹಸುರು ಮಿಶ್ರಿತ ನೀರು. ಒಂದೇ ಸಮನೆ ವಾಂತಿಯಾಯ್ತು.'
'ಅದನ್ನು ಪಿತ್ತರಸವೆನ್ನುತ್ತಾರೆ. ಅದನ್ನು ನಾನೇ ತಯಾರಿಸುತ್ತೇನೆ.'
'ಅಂತಹ, ಕೆಲಸಕ್ಕೆ ಬಾರದ, ವಾಂತಿಗೆ ಕಾರಣವಾದ ರಸವನ್ನು ಸುರಿಸುವುದೇ ನಿನ್ನ ಕೆಲಸವೇ?'
ಅಯ್ಯೋ! ಮೂರ್ಖ, ನನ್ನ ಬಗ್ಗೆ ನಿನ್ನ ತಿಳಿವಳಿಕೆ ಇಷ್ಟೊಂದು ಅಜ್ನಾನದಿಂದ ಕೂಡಿದೆಯಲ್ಲ ಎಂದು ದುಃಖವಾಗುತ್ತದೆ. ನಾನು ನಿನ್ನ ಶರೀರದ ರಾಸಾಯಿನಿಕ ಕಾರ್ಖಾನೆ. ನನ್ನಂತಹದೇ ಒಂದು ರಾಸಾಯಿನಿಕ ಕಾರ್ಖಾನೆಯನ್ನು ಹೊರಗಡೆ ತಯಾರಿಸಲು ಅನೇಕ ಎಕರೆ ಜಮೀನು ಬೇಕಾಗುತ್ತದೆ. ಬೇರೆ ಬೇರೆ ರೀತಿಯ ಒಂದು ಸಾವಿರ ಕೆಲಸಗಳನ್ನು ಮಾಡಲು ಬೇಕಾದ ಕಿಣ್ವಗಳು ನನ್ನಲ್ಲಿ ತಯಾರಾಗುತ್ತವೆ. ಗ್ರಂಥಿಗಳಲ್ಲೆಲ್ಲಾ ದೊಡ್ಡವನು ನಾನೇ. ನನ್ನ ತೂಕ ಸುಮಾರು ೨ ಕಿ.ಗ್ರಾಂ. ನಾನು ಜಠರದ ಬಲ ಮೇಲ್ಭಾಗವನ್ನೆಲ್ಲಾ ಆಕ್ರಮಿಸಿದ್ದೇನೆ. ನೋಟಕ್ಕೆ ಒಂದು ಟೋಪಿಯಂತೆ ಕಾಣುತ್ತೇನೆ. ನಿಸರ್ಗ, ಜೀರ್ಣಾಂಗಗಳಿಗೆ ಹಾಕಿದ ಟೋಪಿ! ''ಟೋಪಿ ಹಾಕುವುದು'-ಎಂದರೆ ಮೋಸ ಮಾಡುವುದೆಂದು ನೀನು ಅರ್ಥ ಮಾಡಿಕೊಳ್ಳುತ್ತೀಯೇ. ಇದು ಮನುಷ್ಯನ ಅನರ್ಥಕೋಶದಲ್ಲಿಯ ಅರ್ಥ! ನಮ್ಮ ಅರ್ಥದಲ್ಲಿ ರಕ್ಷಣೆಗಾಗಿ ಉಪಯೋಗಿಸುವುದು. ನಾನು ನಿನ್ನ ಶರೀರಕ್ಕಾಗಿ ಮಾಡುವ ಕೆಲಸವನ್ನು ನೋಡಿದರೆ ಯಾವ ರೀತಿ ಅರ್ಥ ಮಾಡುವುದು ಸರಿಯೆಂದು ನಿನಗೇ ತೋರುತ್ತದೆ. ನನ್ನ ಕೆಲಸವನ್ನು ನಿಲ್ಲಿಸಿದರೆ ಕೆಲವೇ ಕ್ಷಣಗಳಲ್ಲಿ ನಿನ್ನ ಸ್ಮಶಾನಯಾತ್ರೆಗೆ ತಯಾರಿ ನಡೆಸಬೇಕಾಗುತ್ತದೆ. ಆದರೆ ನಾನು ಅಷ್ಟು ಬೇಗ ನನ್ನ ಕೆಲಸವನ್ನು ಒಮ್ಮೆಗೇ ನಿಲ್ಲಿಸುವುದಿಲ್ಲ. ನನ್ನ ಜೀವಕಣಗಳಲ್ಲಿ ೮೫% ಹಾಳಾಗಿದ್ದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಇದು ನಿನಗೆ ವರವೂ ಹೌದು, ಶಾಪವೂ ಹೌದು. ಹೇಗೆ ವರವೆಂದರೆ, ಮುಕ್ಕಾಲು ಭಾಗ ನಾನು ತೊಂದರೆಗೆ ಒಳಗಾಗಿದ್ದರೂ ನಿನಗೆ ತೊಂದರೆ ಕೊಡದೆ ಕೆಲಸವನ್ನು ತೂಗಿಸಿಕೊಂಡು ಹೋಗುತ್ತೇನೆ. ಶಾಪ ಹೇಗೆಂದರೆ, ನಿನಗೆ ನಾನು ಕಿರಿಕಿರಿ ಉಂಟುಮಾಡದುದರಿಂದ ನೀನು ಸುಮ್ಮನಿದ್ದುಬಿಡುತ್ತೀಯೆ. ಕಡೇ ಗಳಿಗೆಯಲ್ಲಿ ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತೀಯೆ. ೮೦% ನನ್ನನು ಕಿತ್ತೊಗೆದಿದ್ದರೂ ಸಹ ಮತ್ತೆ ಪೂರ್ಣ ಅಂಗವಾಗಿ ನಾನು ಬೆಳೆಯಬಲ್ಲೆ. ನನ್ನ ಕೆಲಸಗಳ ಬಗ್ಗೆ ಕೆಲವನ್ನು ಮಾತ್ರ ತಿಳಿಸುತ್ತೇನೆ.
ನೀನು ಆಟವಾಡಲು ಮಾಂಸಖಂಡಕ್ಕೆ ಶಕ್ತಿಯನ್ನು ಒದಗಿಸುವವನು ನಾನು. ರಾತ್ರಿಯ 'ಇರುಳುಗಣ್ಣು' ಬರದಂತೆ ತಡೆಯುವವನು ನಾನು. ನೀನು ಬೆರಳನ್ನು ಕೊಯ್ದುಕೊಂಡರೆ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವವನು ನಾನು. ಕಾಯಿಲೆ ಬರದಂತೆ ತಡೆಯುವ ರೋಗನಿರೋಧಕ ವಸ್ತು(ಆಂಟಿಬಾಡಿ) ವನ್ನು ತಯಾರಿಸುವವನು ನಾನು.
ಶರೀರದ ಕೆಲಸದಾಳುಗಳು ಜೀವಕೋಶಗಳು. ನನ್ನ ಜೀವಕೋಶಗಳನ್ನು ಬೇರೆಯ ಹೆಸರಿನಿಂದಲೇ ಕರೆಯುತ್ತಾರೆ-ಅವುಗಳಿಗೆ ಹೆಸರು ಹೆಪಟೊಸೈಟ್ ಗಳೆಂದು. ಇವು ಆಹಾರದ ಮೂರು ಘಟಕಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಮೂರರಲ್ಲಿ ಮುಖ್ಯವಾದದ್ದು ಮೇದಸ್ಸಿನ ಜೀರ್ಣಕ್ರಿಯೆ.
ಮೇದಸ್ಸಿನ ಜೀರ್ಣಕ್ರಿಯೆ : ಇದೇ ನನ್ನ ಮುಖ್ಯ ಕೆಲಸ-ಪಿತ್ತರಸದ ಉತ್ಪತ್ತಿ. ಒಂದು ಸೆಕೆಂಡಿನಲ್ಲಿ ಹತ್ತು ಮಿಲಿಯನ್ ಕೆಂಪು ರಕ್ತಕಣಗಳು ಸಾಯುತ್ತವೆ. ಅದರಲ್ಲಿ ಸ್ವಲ್ಪ ಭಾಗವನ್ನು ಮತ್ತೆ ಹೊಚ್ಚಹೊಸ ಕೆಂಪುರಕ್ತಕಣಗಳನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ಉಳಿದುದನ್ನು ಪಿತ್ತರಸವನ್ನಾಗಿ ಮಾಡಿಕೊಳ್ಳುತ್ತೇನೆ. ಇನ್ನೂ ಹೆಚ್ಚಾದುದನ್ನು ಹೊರಕ್ಕೆ ಹಾಕುತ್ತೇನೆ. ಹಸಿರು ಮಿಶ್ರಿತ ಹಳದಿಯಾದ ಕಹಿಯಿಂದ ಕೂಡಿದ ಜುಗುಟಾದ ದ್ರವವೇ ಪಿತ್ತ ರಸ(ಬೈಲ್). ಇದು ಕೊಬ್ಬನ್ನು ಕರಗಿಸುತ್ತದೆ. ನನ್ನಲ್ಲಿ ತಯಾರಾದ ಈ ದ್ರವ, ಗಾಲ್ ಬ್ಲಾಡರ್ ನಲ್ಲಿ ಶೇಖರವಾಗುತ್ತದೆ. ಕೊಬ್ಬಿನ ಪದಾರ್ಥ ಡಿಯೋಡಿನಂ ಸೇರಿದ ತಕ್ಷಣ ಗಾಲ್ ಬ್ಲಾಡರ್ ನಿಂದ ಪಿತ್ತ ರಸ ಅಲ್ಲಿಗೆ ಸೇರುತ್ತದೆ. ಡಿಜರ್ಜೆಂಟ್ ಸೋಪು ಕೊಳೆಯನ್ನು ಹೇಗೆ ನೊರೆಯ ರೂಪಕ್ಕೆ ತರುತ್ತದೆಯೋ ಹಾಗೆ ಈ ಪಿತ್ತರಸವು ಕೊಬ್ಬನ್ನು ನೊರೆ ಬರಿಸಿ ಜೀರ್ಣಿಸಲು ಅನುಕೂಲವಾಗುವ ಫ್ಯಾಟಿ ಆಮ್ಲವಾಗಿ ಪರಿವರ್ತಿಸುತ್ತದೆ. ಒಮ್ಮೊಮ್ಮೆ ನನ್ನ ಈ ಪಿತ್ತರಸ ರಕ್ತಕ್ಕೆ ಸೇರಿದರೆ ಕಣ್ಣು ಮತ್ತು ಮೂತ್ರ ಹಳದಿಯಾಗಿ 'ಅರಿಶಿನ ಕಾಮಾಲೆ' ಎಂಬ ರೋಗ ಬರುತ್ತದೆ.
ಸಸಾರಜನಕದ ಜೀರ್ಣಕ್ರಿಯೆ : ಸಸಾರಜನಕ ವಸ್ತುಗಳು ಶರೀರದಲ್ಲಿ ಕಿಣ್ವಗಳ ಸಹಾಯದಿಂದ ಅಮೈನೋ ಆಮ್ಲಗಳಾಗಿ ಒಡೆಯಲ್ಪಡುತ್ತವೆ. ಇದು ರಕ್ತಕ್ಕೆ ಹಾಗೆಯೇ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಮಾನವಶರೀರ ತನ್ನದಾಗಿಸಿಕೊಳ್ಳುವ ರೂಪಕ್ಕೆ ತರುವವನು ನಾನು. ನೀನು ಹೆಚ್ಚು ದುರಾಸೆಯಿಂದ ಹೆಚ್ಚು ಹೆಚ್ಚು ಸಸಾರಜನಕ ವಸ್ತುಗಳನ್ನು ತಿಂದಿದ್ದರೆ ಅದನ್ನು 'ಯೂರಿಯಾ' ಆಗಿ ಪರಿವರ್ತಿಸಿ ಮೂತ್ರಜನಕಾಂಗದ ಮೂಲಕ ಹೊರದೂಡುವವನು ನಾನು.
ಪಿಷ್ಠದ ಜೀರ್ಣಕ್ರಿಯೆ : ಪಿಷ್ಠವು ಗ್ಲೂಕೋಸ್ ಆಗಿ ರಕ್ತದಲ್ಲಿರುತ್ತದೆ. ಈ ಸಕ್ಕರೆಯನ್ನು ಗ್ಲೈಕೋಜಿನ್ ಎಂಬ ರೂಪಕ್ಕೆ ಪರಿವರ್ತಿಸಿ ನನ್ನಲ್ಲಿ ಅಡಗಿಸಿಟ್ಟುಕೊಂಡಿರುತ್ತೇನೆ. ಸುಮಾರು ೨೫೦ ಗ್ರಾಂ ಸಕ್ಕರೆ ಈ ರೀತಿ ಶೇಖರಿಸಲ್ಪಡುತ್ತದೆ. ಸಕ್ಕರೆ ರಾಜಕೀಯವನ್ನು ನಾನು ಮಾಡುವುದಿಲ್ಲ. ಅವಶ್ಯಕತೆಯಿದ್ದಾಗ ನಾನು ಈ ಗ್ಲೈಕೋಜಿನ್ನನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಶರೀರಕ್ಕೆ ಕೊಡುತ್ತೇನೆ. ಮುಖ್ಯವಾಗಿ ಮೆದುಳಿಗೆ ಸಕ್ಕರೆ ಸದಾ ಬೇಕೇಬೇಕು. ಕೆಲವೊಮ್ಮೆ ಉಪವಾಸಮಾಡುತ್ತೀಯೆ, ಮತ್ತೆ ಕೆಲವು ಸಲ ಕಾಯಿಲೆಯ ಕಾರಣದಿಂದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಶರೀರ ಹಾಗೆಯೇ ಇರಬಲ್ಲದು. ಆದರೆ ಮೆದುಳಿಗೆ ಸಕ್ಕರೆ ಬೇಕೇಬೇಕು. ಅಂತಹ ಸನ್ನಿವೇಶದಲ್ಲಿ ನಾನು ಸಕ್ಕರೆಯನ್ನು ಮೆದುಳಿಗೆ ಒದಗಿಸುತ್ತೇನೆ.
ನಾನು ಅಡ್ರಿನಲ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತೇನೆ. ಹಾಗೆಯೇ ಹೃದಯಕ್ಕೆ ಒಂದು ಸುರಕ್ಷಿತ ಕವಾಟದಂತೆ ವರ್ತಿಸುತ್ತೇನೆ. ನನ್ನಿಂದ ಹೃದಯಕ್ಕೆ ಹೆಪ್ಟಿಕ್ ರಕ್ತನಾಳದ ಮುಖಾಂತರ ನೇರ ಸಂಪರ್ಕ ಉಂಟು. ನೀನು ಕೋಪಗೊಂಡ ಸಂದರ್ಭದಲ್ಲಿ ರಕ್ತ ಜೋರಾಗಿ ಹೃದಯಕ್ಕೆ ನುಗ್ಗುತ್ತದೆ. ಅಂತಹ ಸನ್ನಿವೇಶದಲ್ಲಿ ಹೃದಯಾಘಾತವಾಗುವ ಸಂಭವ ಉಂಟು. ಆಗ ಸ್ಪಂಜಿನಂತೆ ನಾನೇ ರಕ್ತವನ್ನು ಹೀರಿಕೊಂಡು ನಿಧಾನವಾಗಿ ಅದನ್ನು ಹೃದಯಕ್ಕೆ ರವಾನಿಸುತ್ತೇನೆ. ಆಗ ಹೃದಯ ಸುಲಲಿತವಾಗಿ ಕೆಲಸ ಮಾಡಬಲ್ಲದು.
ನಾನು ಶರೀರದ ಒಂದು ದೊಡ್ಡ ವಿಷಾಪಹಾರಿ. ನಿಕೋಟಿನ್, ಕೆಫೀನ್, ತ್ಯಾನಿನ್ ಮುಂತಾದ ವಿಷಗಳನ್ನು ನೀನು ನುಂಗುವೆಯಲ್ಲ, ಅದು ಹಾಗೆಯೇ ರಕ್ತ ಸೇರಿದ್ದರೆ ನಿಮಿಷದಲ್ಲಿ ನೀನು ಇಲ್ಲವಾಗುತ್ತಿದ್ದೆ. ಆದರೆ ನನ್ನ ಮುಖಾಂತರ ಹೋಗುವಾಗ ನಾನು ಮೊದಲೇ ನುಂಗಿ ನೀರು ಕುಡಿದುಬಿಡುತ್ತೇನೆ. ಅದರಿಂದ ಹೃದಯ ಸುರಕ್ಷಿತ. ಅಲ್ಲದೆ ಶರೀರ ಎನ್ನುವ ಕಾರ್ಖಾನೆಯು ಪ್ರತಿಕ್ಷಣವೂ ವಿಷವಸ್ತುಗಳನ್ನು ಉಪವಸ್ತುಗಳನ್ನಾಗಿ ತಯಾರಿಸುತ್ತಲೇ ಇರುತ್ತದೆ. ಇದನ್ನು ಕೂಡಲೇ ಹೊರಕ್ಕೆ ಹಾಕಬೇಕು. ಇಲ್ಲದಿದ್ದರೆ ಜೀವಕ್ಕೇ ಅಪಾಯ. ಆ ವಿಷವಸ್ತುಗಳನ್ನು ತಕ್ಷಣವೇ ನಿವಾರಿಸಿಬಿಡುತ್ತೇನೆ. ನೀನು ಸೇವಿಸುವ ಆಲ್ಕೋಹಾಲ್ ರಕ್ತ ಸೇರುತ್ತದೆ. ನಾನು ಅದನ್ನು ನಿರುಪದ್ರವಿಯಾದ ಕಾರ್ಬನ್ ದೈ ಆಕ್ಸೈಡ್ ಮತ್ತು ನೀರನ್ನಾಗಿ ಒಎಯುತ್ತೇನೆ. ನೀನು ಮದ್ಯಪಾನಾಸಕ್ತನಾದರೆ ನನ್ನ ಶಕ್ತಿ ಮೀರಿ ದುಡಿದು ದುಡಿದು ನಿಷ್ಕ್ರ್‍ಇಯನಾಗುತ್ತೇನೆ. ಮುಂದಿನದು ನಿನ್ನ ಹಣೆಯ ಬರಹ. ನನ್ನ ಪುರಾಣ ಬೆಳೆಸಿದಷ್ಟೂ ಬೆಳೆಯುತ್ತದೆ.
ನೆನು ದಪ್ಪನಾದರೆ ನಾನೂ ದಪ್ಪವಾಗುತ್ತೇನೆ. ಒಳ್ಳೆಯ ಆಹಾರ, ವ್ಯಾಯಾಮದಿಂದ ನಾನು ಆರೋಗ್ಯವಾಗಿರುತ್ತೇನೆ. ನಾನು ಆರೋಗ್ಯವಾಗಿದ್ದರೆ ಮಾತ್ರ ನೀನು ಆರೋಗ್ಯವಾಗಿರಲು ಸಾಧ್ಯ. ನನ್ನ ಹೆಸರು ಲಿವರ್, ಅಂದರೆ ನಾನು ಶರೀರದ ಲೀವರ್(ಸನ್ನೆ), ನಾನು ಶರೀರದ ಆರೋಗ್ಯದ ಸಮತೋಲನೆಯ ಸಂಕೇತ. ಸನ್ನೆ ಸಮವಾಗಿದ್ದರೆ ಆರೋಗ್ಯ, ಏರುಪೇರಾದರೆ ಆರೋಗ್ಯ ಸೊನ್ನೆ.
ಸಣ್ಣ ಕರುಳು :
ನಾನು ನಿನ್ನ ಸಣ್ಣ ಕರುಳು. ಜಠರದಿಂದ ಕೆಳಗೆ ಹಾವಿನಂತೆ ಸುತ್ತಿಕೊಂಡು ಇಪ್ಪತ್ತನಾಲ್ಕು ಅಡಿ ಇದ್ದೇನೆ. ನೀನು ನನಗೆ ಆಹಾರ ಕೊಡುತ್ತೇನೆಂದು ಬೀಗುತ್ತೀಯೆ. ನಿಜವಾಗಿ ನಾನು ನಿನಗೆ ಆಹಾರ ಕೊಡುತ್ತಿದ್ದೇನೆ! ನೀನು ತಿಂದ ಆಹಾರ ಹಾಗೆಯೇ ರಕ್ತ ಸೇರಿದರೆ ನಿಮಿಷಾರ್ಧದಲ್ಲಿ ನಂಜಾಗಿ ಸಾಯುತ್ತೀಯೆ. ಆ ಆಹಾರವನ್ನು ರಕ್ತವಾಗುವಂತೆ ಮಾಡುವವ ನಾನು. ಆಹಾರ ರಕ್ತಕ್ಕೆ ಸೇರಿದ ನಂತರ ಶರೀರದ ಕೋಟ್ಯಾಂತರ ಜೀವಕೋಶಗಳಿಗೆ ಶಕ್ತಿ. ಬಾಯಿಯಿಂದ ಜೀರ್ಣಕ್ರಿಯೆ ಪ್ರಾರಂಭವಾದರೂ ಅದನ್ನು ಅಂತ್ಯಗೊಳಿಸುವವನು ನಾನು. ಆಹಾರದಲ್ಲಿನ ಕೊಬ್ಬನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರಾಲ್ ಗಳಾಗಿ ಒಡೆಯುತ್ತೇನೆ. ಸಸಾರಜನಕ ವಸ್ತುಗಳನ್ನು ಅಮೈನೋ ಆಮ್ಲಗಳಾಗಿ ಬೇರ್ಪಡಿಸುತ್ತೇನೆ. ಪಿಷ್ಠವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತೇನೆ. ನಾರು-ಬೇರುಗಳನ್ನು ಬಿಟ್ಟು ಉಳಿದ ಎಲ್ಲಾ ಆಹಾರಾಂಶಗಳನ್ನು ರಕ್ತಕ್ಕೆ ಸೇರಿಸುತ್ತೇನೆ. ನಾನು ಹೊರಕ್ಕೆ ನೂಕುವ ವಸ್ತುಗಳಲ್ಲಿ ಅರ್ಧದಷ್ಟು ಸತ್ತ ಬ್ಯಾಕ್ಟೀರಿಯಾಗಳೂ, ಮತ್ತರ್ಧ, ದಾರಿಯುದ್ದಕ್ಕೂ ನಾನು ಸ್ರವಿಸಿದ ಆಮ, ಜತೆಗೆ ನಾನು ಅರಗಿಸಿಕೊಳ್ಳಲಾರದ ವಸ್ತುಗಳು.
ಡಿಯೋಡಿನಂ ಬಿಟ್ಟನಂತರ ನನ್ನ ರಾಜ್ಯಭಾರ. ಡಿಯೋದಿನಂ ಮುಂದೆ ೮ ಅಡಿ ಉದ್ದದ ಜೆಜುನಂ. ಅದು ನಾಲ್ಕು ಸೆಂ.ಮಿ. ವ್ಯಾಸದಿಂದ ಕೂಡಿದೆ. ಅಲ್ಲಿಂದ ಮುಂದೆ ಹನ್ನೆರಡಡಿ, ಅದಕ್ಕಿಂತಲೂ ಕಿರಿದಾದ ಇಲಿಯಮ್, ನನ್ನಲ್ಲಿ ಮಿಣಿ ಜೀವಿಗಳು(ಬ್ಯಾಕ್ಟೀರಿಯಾ) ವೃದ್ಧಿಯಾಗಲಾರವು. ಕಾರಣ, ಜಠರದ ಆಮ್ಲ ಅವುಗಳನ್ನು ಕೊಂದಿರುತ್ತವೆ. ನೀನು ತೆಗೆದುಕೊಂಡ ಒಂದು ಲೋಟ ನೀರು ಹತ್ತು ನಿಮಿಷಗಳಲ್ಲಿ ನನ್ನಲ್ಲಿಗೆ ಬಂದಿರುತ್ತದೆ. ಆದರೆ ಘನಾಹಾರ ನಾಲ್ಕು ಘಂಟೆ ತೆಗೆದುಕೊಳ್ಳುತ್ತದೆ. ಮೇದೋಜೀರಕಗ್ರಂಥಿ ಪ್ರತ್ಯಾಮ್ಲೀಯ ರಸಗಳನ್ನು ಉತ್ಪತ್ತಿಮಾಡಿ ನನ್ನ ಮುಂಭಾಗಕ್ಕೆ ರವಾನಿಸುತ್ತದೆ. ಇದು ಸುಮಾರು ೧ ಲೀಟರಿನಷ್ಟಿರುತ್ತದೆ. ಆದ್ದರಿಂದ ಆಮ್ಲೀಯ ಗುಣದ ರಸ ತನ್ನ ಆಮ್ಲೀಯತೆಯನ್ನು ಕಡಿಮೆ ಮಾಡಿಕೊಂಡು ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುತ್ತದೆ. ಆ ಕೆಲಸ ನಿಂತರೆ ಹುಣ್ಣು ಪ್ರಾರಂಭವಾಗುತ್ತದೆ. ಮುಕ್ಕಾಲು ಭಾಗ, ಹುಣ್ಣಿಗೆ ಡಿಯೋಡಿನಂ ಒಳ್ಳೆಯ ಫಲವತ್ತಾದ ಜಾಗ. ನನ್ನಲ್ಲಿ ತಯಾರಾಗುವ ಕಿಣ್ವಗಳು ಹಲವು. ಟ್ರಿಪ್ಸಿನ್, ಚೈಮೋಟ್ರಿಪ್ಸಿನ್, ಕಾರ್ಬಾಕ್ಸಿಪೆಪ್ ಟೈಡ್ಸ್, ಪ್ಯಾಂಕ್ರಿಯಾಟಿಕ್ ಲಿಪೇಸ್, ಪ್ಯಾಂಕ್ರಿಯಾಟಿಕ್ ಅಮೈಲೇಸ್.
ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತು ೨ ಲೀ.ನಷ್ಟು ನನ್ನ ಸ್ವಂತ ರಸಗಳು ಹೀಗೆ ಒಟ್ಟು ೮ ಲೀ.ನಷ್ಟು ರಸಗಳು ಸಂಗಮವಾಗುತ್ತವೆ.
ನನ್ನ ಒಳಭಾಗ ರೇಷ್ಮೆಯಂತೆ ನುಣುಪಾಗಿರುವಂತೆ ತೋರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕೈ ಬೆರಳಿನಂತಹ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳಿಂದ ನನ್ನ ಒಳಭಾಗ ಆವೃತವಾಗಿದೆ. ಈ ವಿಲ್ಲೈಗಳು ಆಹಾರದಲ್ಲಿನ ಪಿಷ್ಠ, ಸಾರಜನಕ, ಕೊಬ್ಬು, ಜೀವಸತ್ವಗಳು, ಲವಣಗಳು ಮುಂತಾದವುಗಳನ್ನು ಹೀರಿ ರಕ್ತಕ್ಕೆ ಸೇರಿಸುವ ಕಾರ್ಯಮಾಡುತ್ತವೆ.
ನಾನು ಹೊಟ್ಟೆಯ ಗೋಡೆಗೆ ಬಲವಾಗಿ ಬಿಗಿಯಲ್ಪಟ್ಟಿಲ್ಲ. ಆದ್ದರಿಂದ ಎರಡು ರೀತಿಯ ಚಲನೆ ಸಾಧ್ಯ. ನನ್ನಲ್ಲಿಯ ಮಾಂಸಖಂಡಗಳು ಅಲೆಯ ರೂಪದ ಚಲನೆಯನ್ನು ಉಂಟುಮಾಡುತ್ತವೆ. ಮತ್ತೊಂದು ರೀತಿಯ ಮಾಂಸಖಂಡಗಳು ಜಿಗಿತವನ್ನು ಉಂಟುಮಾಡುತ್ತವೆ. ಇವೆರಡು ರೀತಿಯ ಚಲನೆಯಿಂದ ದ್ರವರೂಪದ ಆಹಾರ ಸ್ವಲ್ಪಸ್ವಲ್ಪವೇ ನಿಧಾನವಾಗಿ ಮುಂದಕ್ಕೆ ತಳ್ಳಲ್ಪಡುತ್ತದೆ. ಆಹಾರ, ನನ್ನಲ್ಲಿ ೩ ರಿಂದ ೮ ಗಂಟೆಗಳ ಕಾಲ ಉಳಿದು, ರಕ್ತಕ್ಕೆ ಸೇರಲು ಯೋಗ್ಯವಾದ ಅಂಶ ರಕ್ತಕ್ಕೆ ಸೇರಿ ಉಳಿದದ್ದು ಮುಂದಕ್ಕೆ ದೂಡಲ್ಪಡುತ್ತದೆ.
ನನ್ನ ಹೆಸರು ಸಣ್ಣಕರುಳೆಂದಿರಬಹುದು. ಆದರೆ ನಾನು ಮಡುವ ಕೆಲಸ ಸಣ್ಣದಲ್ಲ!
'ಹೆಂಗರುಳಿನವ' ಎಂದು ಗಂಡಸನ್ನು ಆಡಿಕೊಳ್ಳುತ್ತಾರೆ. ಅದರಥ ಇಷ್ಟೇ, ನಾನು ಭಾವನೆಗಳಿಗೆ ಬೇಗ ಸ್ಪಂದಿಸುತ್ತೇನೆ. ಹೆಂಗಸರಿಗೇ ಆಗಲಿ, ಗಂಡಸರಿಗೇ ಆಗಲಿ ಈ ಭಾವನೆಗಳ ತಾಕಲಾಟ ಅತಿಯಾದರೆ ನನಗೆ ಅನವಶ್ಯಕ ಶ್ರಮ. ಇದರಿಂದ ನನ್ನ ಆಯಸ್ಸು ಕಡಿಮೆಯಾಗುತ್ತದೆ.
ಆಹಾರಾಂಶವು ಹೀರಲ್ಪಟ್ಟು ಉಳಿದ ಭಾಗ, ದ್ರವರೂಪದಲ್ಲಿರುವುದು. ಅದನ್ನು ನಿಧಾನವಾಗಿ ದೊಡ್ಡ ಕರುಳಿಗೆ ನೂಕಿಬಿಡುತ್ತೇನೆ. ಮುಂದಿನದು ನನ್ನ ದೊಡ್ಡಣ್ಣನ ಕಾರ್‍ಯ.
ದೊಡ್ಡ ಕರುಳು :
ನಾನು ನಿನ್ನ ದೊಡ್ಡ ಕರುಳು. ಅಡ್ಡಕರುಳು, ಉದ್ದಕರುಳು, ನೆಟ್ಟಕರುಳು ಎಂದು ಮೂರು ಭಾಗವಾಗಿ ಒಟ್ಟು ಆರಡಿ ಇದ್ದೇನೆ. ನನ್ನ ತಮ್ಮ ಸಣ್ಣ ಕರುಳು ಆಹಾರಾಂಶವನ್ನು ಹೀರಿ ಉಳಿದ ದ್ರವದ ರೂಪವನ್ನು ನನಗೆ ತಳ್ಳುತ್ತಾನೆ. ನಾನು ನನ್ನ ಅಡ್ಡಕರುಳು ಮತ್ತು ಉದ್ದಕರುಳಿನಲ್ಲಿ ನೀರನ್ನು ಹೀರಿ ರಕ್ತಕ್ಕೆ ಕಳುಹಿಸುತ್ತೇನೆ. ಎ ನೀರನ್ನು ಹೀರಿ ರಕ್ತಕ್ಕೆ ಏಕೆ ಕಳುಹಿಸಬೇಕು? ಅದು ಬರೀ ನೀರಲ್ಲ, ಬಾಯಿಯಿಂದ ಪ್ರಾರಂಭವಾಗಿ ದಾರಿಯುದ್ದಕ್ಕೂ ಸೇರಿಸಿಕೊಂಡು ಬಂದ ಅತ್ಯಮೂಲ್ಯ ಜೀವರಸಗಳು ಅದರಲ್ಲಿದೆ. ಲವಣಗಳ ಅಗರವೇ ಅದಾಗಿದೆ. ಅದನ್ನು ರಕ್ತಕ್ಕೆ ಕಳುಹಿಸದಿದ್ದರೆ ಕೆಲವೇ ಗಂಟೆಗಳಲ್ಲಿ ಸಾವು ಬರಬಹುದು. ಈ ನೀರನ್ನು ಹೀರುವ ಕ್ರಿಯೆಗೆ ನನಗೇನೂ ಅವಸರವಿಲ್ಲ. ಹನ್ನೆರಡರಿಂದ ಇಪ್ಪತ್ತುನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತೇನೆ, ನಾನು ನೀರನ್ನು ಹೀರದೆ ಹಾಗೆಯೇ ಹೊರಕ್ಕೆ ನೂಕಿದ್ದರೆ ಏನಾಗುತ್ತಿತ್ತು ಎಂದು ಕೇಳಿದೆಯಲ್ಲವೇ? ಹಾಗೂ ಒಮ್ಮೊಮ್ಮೆ ಮಾಡುತ್ತೇನೆ. ನನಗೆ ಕಿರಿಕಿರಿಯಾದರೆ ಮಾತ್ರ. ನಾನು ಹಾಗೆ ಮಾಡಿದರೆ ತಕ್ಷಣ ದಾಕ್ಟರಲ್ಲಿಗೆ ಓಡುತ್ತೀಯೆ. ಅದೇ ಅತಿಸಾರ.
ನನ್ನ ತಮ್ಮನಿಗಿಂತ ನಾನು ಬಹಳ ಉದಾರಿ. ಅವನು ಯಾವುದೇ ರೀತಿಯ ಮಿಣಿಜೀವಿಗಳೂ(ಮೈಕ್ರೋಬ್ಸ್) ಬೆಳೆಯಲು ಅವಕಾಶ ಕೊಡುವುದಿಲ್ಲ. ಆದರೆ ನಾನು ಹಾಗಲ್ಲ. ಅವುಗಳ ಬಗ್ಗೆ ನನಗೆ ತುಂಬಾ ಅನುಕಂಪ! ಐವತ್ತಕ್ಕೂ ಹೆಚ್ಚು ಮಿಣಿಜೀವಿಗಳಿಗೆ ನಾನು ಆಶ್ರಯ ಕೊಡುತ್ತೇನೆ! ಜಂತು ಮುಂತಾದ ಹುಳುಗಳು ಬೆಳೆದರೆ ನಾನು ಅಡ್ಡಿಪಡಿಸುವುದಿಲ್ಲ!!
ಹೊಟ್ಟೆಯಲ್ಲಿ 'ಗುಡು' 'ಗುಡು' ಎಂದು ಶಬ್ದ ಮಾಡುವವನು ನಾನೇ. ಇದು ಬರೀ ವಾಯು. ನೀನು ಮಾತಾಡುವಾಗ ನುಂಗಿರುವ ಗಾಳಿ, ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾದ ವಾಯು ಎಲ್ಲವನ್ನೂ ಈ ರೂಪದಲ್ಲಿ ಹೊರಕ್ಕೆ ಹಾಕುತ್ತೇನೆ. ಜತೆಗೆ ನಾನು ಕೆಲವು ಗ್ಯಾಸ್ಗಳನ್ನು ತಯಾರಿಸುತ್ತೇನೆ. ಅವುಗಳಲ್ಲಿ ಮೀಥೇನ್ ಮತ್ತು ಹೈಡ್ರೋಜಿನ್ ಮುಖ್ಯವಾದವು. ಹೆಚ್ಚೂ ಕಡಿಮೆ ೧ ಲೀ. ಗ್ಯಾಸ್ ಹೊರಕ್ಕೆ ಹಾಕುತ್ತೇನೆ. ಇದು ಹೆಚ್ಚಾದಲ್ಲಿ ಹೊಟ್ತೆಯಲ್ಲಿ ನೋವು ಉಂಟಾಗುತ್ತದೆ. ನಿನ್ನ ಎಲ್ಲಾ ಒಳ ಅಂಗಗಳಂತೆ ನಿನ್ನ ಮಾನಸಿಕ ಸ್ಥಿತಿಯನ್ನು ನಾನೂ ಅನುಸರಿಸುತ್ತೇನೆ. ನಿನಗೆ ಕೋಪ ಬಂದರೆ ನನಗೆ ತಾಪ ಉಂಟಾಗುತ್ತದೆ. ಆಗ ನಿನಗೆ ಹಸಿವೆಯಾಗದಂತೆ ತಡೆದುಬಿಡುತ್ತೇನೆ. ನೀನು ಬುದ್ಧಿವಂತನಾದರೆ ಆಗ ಏನೂ ಆಹಾರ ತೆಗೆದುಕೊಳ್ಳಬಾರದು. ಅಂತೆಯೇ ನೆನ್ನು ತುಂಬಾ ಸುಸ್ತಾಗಿದ್ದಾಗ, ಚಿಂತೆಗೊಳಗಾಗಿದ್ದಾಗಲೂ ಇದೇ ನಿಯಮ. ನಿನ್ನ ತಲೆಗೂ ನನಗೂ ಸಂಬಂಧವಿದೆ. ನಿನ್ನ ತಲೆಯಲ್ಲಿ ನಡೆಯುವ ಯುದ್ಧಕ್ಕೆ ನಾನು ಬಲಿ, ತಲೆ ಉತ್ತರ ಹುಡುಕುವವರೆಗೂ ನನ್ನ ಸ್ವಂತ ಕೆಲಸ ನಿಧಾನವಾಗುತ್ತದೆ. ನರಗಳಲ್ಲಿನ ಒತ್ತಡ, ಔಷಧ, ಬ್ಯಾಕ್ಟೀರಿಯಾ ಇವೆಲ್ಲಾ ನಾನು ನೀರನ್ನು ಪೂರ್ಣವಾಗಿ ಹೀರದಂತೆ ಮಾಡುತ್ತವೆ. ಅದೇ ಭೇಧಿ. ಚಿಂತೆ, ನಾರು-ಬೇರಿಲ್ಲದ ಆಹಾರ, ನನ್ನ ಕೆಲಸಕ್ಕೆ ತಡೆ ಉಂಟುಮಾಡುತ್ತವೆ. ಅದರಿಂದ ಮಲ ಗಟ್ಟಿಯಾಗಿ ಕುರಿಯ ಹಿಕ್ಕೆಯಂತಾಗುತ್ತದೆ. ಇದೇ ಮಲಬದ್ಧತೆ.
ಈ ಮಲಬದ್ಧತೆಯದೇ ಒಂದು ದೊಡ್ಡ ಪುರಾಣ. ಮಲಬದ್ಧತೆಯಿರುವ ಅನೇಕರು ತಮಗೆ ಮಲಬದ್ಧತೆಯಿಲ್ಲವೆಂದು ತಿಳಿದಿದ್ದಾರೆ. ಮಲಬದ್ಧತೆಯಿರದ ಅನೇಕರು ತಮಗೆ ಮಲಬದ್ಧತೆಯಿದೆ ಎಂದು ಹೇಳುತ್ತಾರೆ. 'ಮಲಬದ್ಧತೆಯಾದರೆ ಏನೂ ತಲೆ ಬೀಳುವುದಿಲ್ಲ' ಎಂದು ಹೇಳುವುದು ಒಂದು ವರ್ಗ. ' ಎಲ್ಲಾ ಕಾಯಿಲೆಗಳಿಗೂ ಈ ಮಲಬದ್ಧತೆಯೇ ಮೂಲ' ಎನ್ನುವುದು ಇನ್ನೊಂದು ವರ್ಗ. ಸತ್ಯ ಇವೆರಡರ ಮಧ್ಯೆ ಇದೆ. ನಾನು ತುಂಬಾ ಸೂಕ್ಷ್ಮ. ನೀನು ಗಮನಿಸಿರಬಹುದು. ಬೇರೆಯ ಊರಿಗೆ ಹೋದರೆ ಮಲವಿಸರ್ಜನೆ ಮುಂದೂಡಲ್ಪಡುತ್ತದೆ. ಅದಕ್ಕೆಲ್ಲಾ ಹೆದರಬೇಡ. ನಾನು ಬಹಳ ಮೂಡಿ.. ಒಮ್ಮೊಮ್ಮೆ ಮಲವಿಸರ್ಜನೆಯನ್ನು ಮುಂದಕ್ಕೆ ಹಾಕಿಬಿಡುತ್ತೇನೆ. ಆದರೆ ಇದು ನಿತ್ಯದ ಕತೆಯಾದರೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ಮಲಬದ್ಧತೆಯೆಂದರೇನೆಂದು ಅರ್ಥ ಮಾಡಿಕೋ. ದಿನಕ್ಕೊಮ್ಮೆ ಕಾಲಪ್ರವೃತ್ತಿಯಾದರೆ ಮಲಬದ್ಧತೆಯಿಲ್ಲವೆಂದು ಬಹಳ ಜನರ ಅಭಿಪ್ರಾಯ.
ದಿನಕ್ಕೆ ಊಟ ಮೂರು ಮತ್ತೊಂದು, ಮಲವಿಸಜನೆ ಸಾಕೆ ಒಂದೇ ಒಂದು?
ನೀನು, ಮೇಲೆ ಮೇಲೆ ತುರುಕುತ್ತಿರುವ ಆಹಾರವನ್ನು ದಾರಿಯಲ್ಲಿ ಜೀರ್ಣಮಾಡಲಾರದೆ ಕಡೆಗೆ ನನ್ನಲ್ಲಿಗೆ ತಳ್ಳಿಬಿಡುತ್ತಾರೆ. ( ಈಗ ಪ್ರೈಮರಿ ಸ್ಕೂಲಿನಿಂದ ಹುಡುಗರನ್ನು ಮುಂದು ಮುಂದಕ್ಕೆ ನೂಕುವಂತೆ!) ನಾನು ತಾನೇ ಏನು ಮಾಡಲಿ? ಮುಂದಕ್ಕೆ ತಳ್ಳಿಬಿಡುತ್ತೇನೆ. ನೀನು ಇದನ್ನೇ ಉತ್ತಮ ಮಲವಿಸರ್ಜನೆಯೆಂದುಕೊಳ್ಳುತ್ತೀಯೆ. ಈ ವಿಷಯದಲ್ಲಿ ಓಮ್ದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ, ಒಂದು ಟ್ರೈನ್ ವೇಳೆಗೆ ಸರಿಯಾಗಿ ನಿಲ್ದಾಣಕ್ಕೆ ಬಂತು. ಪ್ರಯಾಣಿಕರೆಲ್ಲಾ ಬಹಳ ಖುಷಿಯಾದರು. ಸ್ಟೇಷನ್ ಮಾಸ್ಟರ್ ಹೇಳಿದರು, 'ಅದು ನಿನ್ನೇ ಬರಬೇಕಾಗಿದ್ದ ಗಾಡಿ, ಇಂದಿನ ವೇಳೆಗೆ ಸರಿಯಾಗಿ ಬಂದಿದೆ. ಸರಿಯಾಗಿ ಇಪ್ಪತ್ತನಾಲ್ಕು ಗಂಟೆಗಳ ತಡ ಅಷ್ಟೆ!' ಹೀಗಾಗಿದೆ ಮಲವಿಸರ್ಜನೆಯ ಸ್ಥಿತಿ. ಆಹಾರದ ಪ್ರಯಾಣ ಇಪ್ಪತ್ತನಾಲ್ಕು ಗಂಟೆಯಲ್ಲಿ ಮುಗಿಯಬೇಕು. ಆದರೆ ನವನಾಗರೀಕತೆಯ ಪ್ರಭಾವದಿಂದ, ಅದರಲ್ಲೂ ವೇಳೆಯಿಲ್ಲವೆಂದು ಒದ್ದಾಡುವ ಐರೋಪ್ಯ ಜನಾಂಗವನ್ನು ಅವರ ಟಾಯ್ಲೆಟ್ಟಿನಲ್ಲಿ ಕಟ್ಟಿಹಾಕಿಬಿಡುತ್ತೇನೆ. ಅಲ್ಲಿ ವೇಳೆ ಅವರ ಅಧೀನವಲ್ಲ, ನನ್ನ ಅಧೀನ. ಕೆಲವರು ಕಾಫಿ, ಕೆಲವರು ಪೇಪರ್, ಕೆಲವರು ಸಿಗರೇಟ್, ಮತ್ತೆ ಕೆಲವರು ರೋಮಾಂಚಕರವಾದ ಕಾದಂಬರಿ ಎಲ್ಲಕ್ಕೂ ಮೊರೆಹೋಗುತ್ತಾರೆ! ಐವತ್ತರ ನಂತರ ಅಣೆಕರು ವಿರೇಚಕಗಳಿಗೆ ಶರಣಾಗುತ್ತಾರೆ. ಚಿಕ್ಕಪ್ರಾಯದಲ್ಲಿ ಹೇಗೋ ನಡೆಯುತ್ತದೆ. ನಿನಗೆ ವಯಸ್ಸಾದಂತೆ ನನಗೂ ವಯಸ್ಸಾಗುತ್ತದೆ. ಹೆಚ್ಚಿಗೆ ಆಹಾರ ಸೇವಿಸಿದರೆ ಅದರಲ್ಲೂ ಕರಿದ ಆಹಾರ, ಈರುಳ್ಳಿ, ಕೋಸು, ಹುರುಳೀಕಾಯಿ ಇತ್ಯಾದಿಗಳು ಹೆಚ್ಚು ವಾಯುವನ್ನು ಉಂಟುಮಾದಿ ತೊಂದರೆ ಕೊಡುತ್ತವೆ. ಮನಸ್ಸಿನಲ್ಲಿ ಉದ್ವೇಗಗಳನ್ನು ಉಂಟುಮಾಡಿಕೊಳ್ಳದೆ, ಹಣ್ಣುಗಳನ್ನೂ ತರಕಾರಿಗಳನ್ನೂ ಹೆಚ್ಚು ಸೇವಿಸಿದರೆ ನಾನು ಕಾರ್ಯವನ್ನು ಚೆನ್ನಾಗಿ ನಿರ್ವಹಿಸುತ್ತೇನೆ. ಆದಷ್ಟೂ ನೀರು ಕುಡಿಯುವುದು ಒಳ್ಳೆಯದು. ನನ್ನನ್ನು ನೀನು ಗೌರವದಿಂದ ನೋಡಿಕೊಂಡರೆ ನಾನು ನಿನಗೆ ತೊಂದರೆ ಕೊಡುವುದಿಲ್ಲ.
ಗುರುಗಳು : ಮಕ್ಕಳೇ ಹೀಗೆ ಬಾಯಿಯಿಂದ ಗುದದ್ವಾರದವರೆಗೂ ಆಹಾರದ ಪ್ರಯಾಣ. ಎಲ್ಲಾ ಅಂಗಗಳೂ ತಮ್ಮ ತಮ್ಮ ಕತೆಯನ್ನು ಹೇಳಿವೆ. ಅವುಗಳ ಕೆಲಸವನ್ನು ಸುಲಭ ಮಾಡಿಕೊಡುವುದೇ ನಿಮ್ಮ ಜವಾಬ್ದಾರಿ. ಹಾಗೆ ಆಹಾರ ಸೇವಿಸಬೇಕು. ಆಹಾರದಷ್ಟೇ ವ್ಯಾಯಾಮವೂ ಮುಖ್ಯ ಮಕ್ಕಳೇ. ವ್ಯಾಯಾಮವಿಲ್ಲದಿದ್ದರೆ ಆಹಾರ ರಕ್ತಗತವಾಗುವುದಿಲ್ಲ. ಆಟ, ಓಟ, ಯೋಗಾಸನ, ಈಜು ಇತ್ಯಾದಿಗಳೆಲ್ಲಾ ಬೇಕೇಬೇಕು.
ವಿದ್ಯಾರ್ಥಿಗಳು : ಈಗ ಆಹಾರ ಹೇಗೆ ಜೀರ್ಣವಾಗುವುದೆಂದು ತಿಳಿಯಿತು. ಅದನ್ನು ಅನುಸರಿಸಿ ಆಹಾರ ತೆಗೆದುಕೊಳ್ಳುತ್ತೇವೆ ಗುರುಗಳೇ!
ಬರೆದವರು : ಜಿ.ವಿ.ವಿ.ಶಾಸ್ತ್ರಿ
ತುಮಕೂರು
ಸಂಗ್ರಹಿಸಿದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಅರುಣ್. ಎಲ್.
೯೮೮೬೪ ೧೭೨೫೨
ಬೆಂಗಳೂರು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ