ಸೂರ್ಯ ಬೇಯಿಸಿದ ಅಡುಗೆ
ಹಣ್ಣು-ಹಂಪಲುಗಳು, ಗೆಡ್ಡೆಗೆಣಸುಗಳು, ಇದನ್ನು ಹಸಿಯ ಆಹಾರ, ಕಚ್ಚಾ ಆಹಾರ, ಕಚ್ಚಾ ನಿರಗ್ನಿ ಆಹಾರ, ಋಷಿಗಳ ಆಹಾರ ಎನ್ನುತ್ತಾರೆ. ಅದನ್ನು ಕಚ್ಚಾ ಎಂದು ಕರೆಯುವುದು ಸರಿಯಲ್ಲ, ಅದೂ ಸಹಾ ಬೇಯಿಸಿದ ಆಹಾರವೇ! ಮನುಷ್ಯನಿಂದಲ್ಲ, ಅಗ್ನಿಯಿಂದಲ್ಲ, ಸೂರ್ಯನಿಂದ.
ಸೂರ್ಯ ಬೇಯಿಸಿದ ಅಡುಗೆ ಅದರ ರುಚಿ ಅಡಿಗಡಿಗೆ, ಹಣ್ಣು-ಹಂಪಲೇ ನಮ್ಮ ಸೌಭಾಗ್ಯ! ಅದನರಿಯದೇ ನಾನಾದೆ ನಿರ್ಭಾಗ್ಯ, ಗೆಡ್ಡೆಗೆಣಸುಗಳು ಭೂಮಿಯಾ ಕೊಡುಗೆ, ಹಣ್ಣು ಹಂಪಲುಗಳು ಸೂರ್ಯನಾ ಕೊಡುಗೆ.
ಗೆಡ್ಡೆಗಳಲ್ಲಿ ಆಹಾರ ಸಂಗ್ರಹಿಸಿಡಲೂ ಸೂರ್ಯ ಬೇಕೇಬೇಕು. ಒಟ್ಟಿನಲ್ಲಿ ಸೂರ್ಯನೇ ನಮ್ಮ ಜೀವನಾಧಾರ. ಆ ಸೂರ್ಯಶಕ್ತಿಯನ್ನು ಜೀವಂತ ರೂಪದಲ್ಲಿ ಹಿಡಿದಿಡುವ ಹೆಚ್ಚು ಶಕ್ತಿಯಿರುವುದು ಹಣ್ಣುಗಳಿಗೆ ಮಾತ್ರ. ಅವು ಹಿಡಿದಿಟ್ಟ ಸೂರ್ಯಶಕ್ತಿಯನ್ನು ಶರೀರಕ್ಕೆ ಒದಗಿಸಬಲ್ಲವು, ಕಾಯಿಲೆ ಬರದಂತೆ ತಡೆಯಬಲ್ಲವು, ಬಂದ ಕಾಯಿಲೆಯನ್ನು ನೀಗಬಲ್ಲವು.
ಹಣ್ಣು ಮತ್ತು ತರಕಾರಿಗಳ ಜೀವಂತಿಕೆ ಬರುವುದು ಸೂರ್ಯನಿಂದಲೇ. ಬೆಳಕಿನ ಶಕ್ತಿ ಇವುಗಳಲ್ಲಿ ಅಡಗಿದೆ. ಆಹಾರ ಒಂದು ಕೂಡಿಟ್ಟ ಶಕ್ತಿ. ಇದನ್ನು ಅಳೆಯಲು ಉಪಯೋಗಿಸುವ ಅಳತೆ ಸೂರ್ಯಪ್ರಕಾಶ ಮೌಲ್ಯ. ಆಹಾರ ಎಷ್ಟು ತಾಜಾ ಇದ್ದರೆ ಅದರ ಸೂರ್ಯಪ್ರಕಾಶ ಮೌಲ್ಯ ಅಷ್ಟು ಹೆಚ್ಚು, ಇದನ್ನು ವಿವರಿಸಿದರು ಡಾ. ಬೆರ್ಚರ್ ಬೆನ್ನರ್. ಸೂರ್ಯಪ್ರಭೆಯನ್ನು ಉಂಡ ಆಹಾರಗಳು ಅದಿಲ್ಲದೆ ಬೆಳೆದ ಆಹಾರಕ್ಕಿಂತ ಹೆಚ್ಚು ರೋಗಪ್ರತಿಬಂದಕ ಗುಣವನ್ನು ಸಂಗ್ರಹಿಸುತ್ತವೆ. 'ಡಿ' ಅನ್ನಾಂಗವಿಲ್ಲದೆ 'ಸಿ' ಅನ್ನಾಂಗ ಶರೀರಕ್ಕೆ ಒದಗದು. ಟೊಮೇಟೋನಲ್ಲಿ 'ಸಿ' ಅನ್ನಾಂಗ ೧೦೦% ಹೆಚ್ಚಿಸುವುದು. ಟರ್ನಿಪ್ನಲ್ಲಿ ೮೦೦% ರಷ್ಟು ಹೆಚ್ಚುತ್ತದೆ. ಸೂರ್ಯನಿಗೆ ಎದುರಾದ ಹಣ್ಣಿನ ಭಾಗ ಹೆಚ್ಚು ಕೆಂಪಾಗಿದ್ದು ಹೆಚ್ಚು 'ಸಿ' ಅನ್ನಾಂಗವನ್ನು ಹೊಂದಿ ರುಚಿಯೂ ಹೆಚ್ಚಾಗಿರುತ್ತದೆ. ಅಲ್ಲದೆ ಕ್ಯಾರೋಟಿನ್, ಥಯಾಮಿನ್ ಇತ್ಯಾದಿ ಅನ್ನಾಂಗಗಳ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ.
ಬಹಳ ವರ್ಷಗಳ ಹಿಂದೆ ಇನ್ನೂ ಸೂರ್ಯನ ಬೆಳಕಿನ ಜೀವಸಂಬಂಧಿ ಕ್ರಿಯೆಯ ಅರಿವು ಇಲ್ಲದಿದ್ದಾಗ ಡಾ. ಬೆರ್ಚರ್ ಬೆನ್ನರ್ ಆಹಾರದಲ್ಲಿ ಸೂರ್ಯಮೌಲ್ಯವನ್ನು ಮುಂದಿಟ್ಟ. ಈಗ ಆಧುನಿಕ ವಿಜ್ನಾನವೂ ಅದನ್ನು ಒಪ್ಪಿದೆ. ಸೂರ್ಯ ಬೇಯಿಸಿದ ಆಹಾರಕ್ಕೂ ಬೆಂಕಿಯಲ್ಲಿ ಬೆಂದ ಆಹಾರಕ್ಕೂ ಇರುವ ವ್ಯತ್ಯಾಸ ಪ್ರಯೋಗಾಲಯದ ಪ್ರನಾಳಕ್ಕೆ ಅರ್ಥವಾಗದಿರಬಹುದು, ಆದರೆ ಜೀವಂತ ಜೀವಕೋಶಗಳಿಗೆ ಅರ್ಥವಾಗುತ್ತದೆ.
ಡಾ. ಜಿಯೋ (ಡಾ.ಜಿಯೋ.ಜೆ.ಡ್ರೆಸ್, ಎಮ್.ಡಿ.,ಚಿಕಾಗೋ) ರ ಪ್ರಕಾರ ಬೇಯಿಸುವಿಕೆ ಆಹಾರದಲ್ಲಿನ ಜೀವ ರಾಸಾಯಿನಿಕ ಕ್ರಿಯೆಯನ್ನು ವ್ಯತ್ಯಾಸಮಾಡುತ್ತದೆ. ಸೂರ್ಯಶಕ್ತಿ ಬಿಡುಗಡೆ ಹೊಂದುತ್ತದೆ. ಅದು ಬೇಯಿಸುವಾಗ ಬರುವ ವಾಸನೆಯ ರೂಪದಲ್ಲಿ ಹೊರಕ್ಕೆ ಹೋಗುತ್ತದೆ; ಜೀವಂತಿಕೆ ಹೊರದೂಡಲ್ಪಡುತ್ತದೆ; ಸಸಾರಜನಕ ಗಟ್ಟಿಯಾಗುತ್ತದೆ; ಪಿಷ್ಟ ಜೀರ್ಣವಾಗದೆ ರಕ್ತಕ್ಕೆ ಸೇರುತ್ತದೆ. ಸೊಪ್ಪುಗಳು ಬೇಯಿಸಲ್ಪಟ್ಟಾಗ ಅವು ಬಣ್ಣ ಕಳೆದುಕೊಳ್ಳುವುದೇ ಜೀವಶಕ್ತಿಯನ್ನು ಕಳೆದುಕೊಂಡ ಸಂಕೇತ. ನೈಸರ್ಗಿಕ ಆಹಾರದಲ್ಲಿನ ಬಣ್ಣ, ವಾಸನೆಯೆ ಬೇರೆ, ಬೇಯಿಸಿದ ಆಹಾರದ ಬಣ್ಣ, ವಾಸನೆಯೇ ಬೇರೆ. ಇದು ರಸನೇಂದ್ರಿಯವನ್ನು ಮೋಸಗೊಳಿಸಿ, ಜೀರ್ಣಾಂಗಗಳನ್ನು ಹಾಳುಮಾಡುತ್ತದೆ. ಶರೀರದಲ್ಲಿ ಕಫಪ್ರವೃತ್ತಿ ಹೆಚ್ಚುತ್ತದೆ. ಜೀರ್ಣಾಂಗಗಳ ಸವೆತದಿಂದ ವಾತಪ್ರವೃತ್ತಿಯೂ ಹೆಚ್ಚುತ್ತದೆ. ಡಾ. ಆರ್ನಾಲ್ಡ್ ಎಹರೇಟ್ ಎಂಬ ಅಮೇರಿಕಾದ ವೈದ್ಯರು, ಎಲ್ಲಾ ಪಿಷ್ಟ ಪದಾರ್ಥಗಳು ಕಫಕಾರಕವೆಂದು ತಮ್ಮ ಮ್ಯೂಕಸ್ ಲೆಸ್ ಡಯಟ್ ಎಂಬ ಪುಸ್ತಕದಲ್ಲಿ ಬರೆಯುತ್ತಾರೆ.
ಸಾಧಾರಣವಾಗಿ ಎಲ್ಲರೂ ಕಚ್ಚಾ ಆಹಾರದಿಂದಲೇ ಆರೋಗ್ಯವಂತರಾಗಿ ಜೀವಿಸಬಹುದು. ಬಹಳ ಜನ ಹಳೆಯ ರೋಗಿಗಳೂ ಸಹ ಎಲ್ಲಾ ವಿಧವಾದ ಔಷಧಿಯ ಪದ್ಧತಿಗಳನ್ನೂ ಪೂರೈಸಿ, ಕಡೆಗೆ ಹಸಿಯಾದ ಆಹಾರಕ್ಕೆ ಬಂದು, ತಮ್ಮ ಕಾಯಿಲೆಗಳನ್ನು ಸಂಪೂರ್ಣವಾಗಿಯೋ ಅಥವಾ ಬಹಳಷ್ಟು ಭಾಗವನ್ನೋ ಕಳೆದುಕೊಂಡಿರುತ್ತಾರೆ.
ಮನುಜನ ಆಹಾರವೆಂದೊಡನೆಯೇ ನಿಸರ್ಗ, ನೈಸರ್ಗಿಕ ಆಹಾರದೆಡೆಗೆ ಕೈತೋರಿಸುತ್ತದೆ. ಮೊದಲನೆಯ ವರ್ಗದ ಆಹಾರವೇ ಮನುಜನ ನಿಜವಾದ ಆಹಾರ. ಅದೇ ನಿರಗ್ನಿ ಆಹಾರ. ನಿಸರ್ಗದಿಂದ ನೇರವಾಗಿ ಬಂದದ್ದು. ಬರೀ ನೀರಿನಿಂದ ತೊಳೆದು ಉಪಯೋಗಿಸಬಹುದಾದದ್ದು. ಅದರ ಸಂಸ್ಕರಣ ಅಂದರೆ, ನೈಸರ್ಗಿಕವಾದ ಎರಡು ಅಥವ ಇನ್ನೂ ಹೆಚ್ಚನ್ನು ಮಿಶ್ರಣ ಮಾಡಿದ್ದು, ಮೊಳಕೆ ಬರಿಸಿದ್ದು, ರಸ ತೆಗೆದದ್ದು ಇತ್ಯಾದಿಗಳು ಮೊದಲ ವರ್ಗದಲ್ಲಿ ಕೆಳಹಂತದವು-ಇವುಗಳನ್ನು 'ನೈಸರ್ಗಿಕ ಮಿಶ್ರಣ' ವೆನ್ನಬಹುದು. ಮುಂದಿನ ಹಂತ ಅಗ್ನಿಯಿಂದ ಸಂಸ್ಕರಿಸಿದ್ದು. ಇದೇ ಮಧ್ಯಸ್ಥದಲ್ಲಿ ಮೊದಲ ಹಂತ. ಉದಾಹರಣೆಗೆ, ಅತಿ ಕಡಿಮೆ ಹುಳಿ, ಉಪ್ಪು, ಕಾರ, ಸಿಹಿಗಳ ಮಿಶ್ರಣ, ಹಬೆಯಲ್ಲಿ ಬೇಯಿಸಿಯಾಗಲಿ ತಿನ್ನಬಹುದು. ಕೊಂಚ ಉಪ್ಪು ಹಾಕಬಹುದು. ಬಹಳ ದಿವಸಗಳಿಂದ ಬೆಂಕಿಗೆ ಒಗ್ಗಿದ ಮನುಷ್ಯ ನಿರಗ್ನಿ ಆಹಾರಕ್ಕೆ ಬರುವ ಹಂತದಲ್ಲಿ ಈ ರೀತಿ ಬಳಸಬಹುದು. ಇದಕ್ಕಿಂತ ಹೆಚ್ಚು ಮಿಶ್ರಣ ಋಣಾತ್ಮಕತೆಯ ಕಡೆಗೆ ವಾಲಿದುದು. ಮುಂದಿನ ಅಸಹಜ ಆಹಾರಗಳೆಲ್ಲವೂ ಋಣಾತ್ಮಕ. ಆರೋಗ್ಯ ಬೇಕೆನ್ನುವವರು ಋಣಾತ್ಮಕ ಆಹಾರವನ್ನು ನಿಷೇಧಿಸಲೇಬೇಕು. ಇಲ್ಲದಿದ್ದರೆ ಆರೋಗ್ಯವನ್ನೇ ಬೆಲೆಯಾಗಿ ತೆರಬೇಕು. ನೈಸರ್ಗಿಕ ಆಹಾರ, ಸಹಜ ಆಹಾರ, ನಮ್ಮ ಗುರಿ. ಶರೀರ, ಜಡ ಭೌತಶಾಸ್ತ್ರದ ನಿಯಮಗಳಿಗೆ ಒಳಪಡುವುದಿಲ್ಲ. ಜೀವಂತ ದೇಹಕ್ಕೆ ಜೀವಂತವಾದ ಆಹಾರ ಬೇಕು. ಹಣ್ಣುಗಳನ್ನು ತಿಂದು ಬೀಜವನ್ನು ಬಿಟ್ಟುಬಿಡುತ್ತೇವೆ. ಅದು ಮತ್ತೆ ಮರವಾಗುವ ಸೃಷ್ಟಿಕ್ರಿಯೆಗೆ ತೊಡಗುತ್ತದೆ. ಅಂತಹ ಜೀವಂತ ಹಣ್ಣುಗಳು ನಮ್ಮ ಮುಖ್ಯ ಆಹಾರ. ಹಿಂದೆ ನಮ್ಮ ಋಷಿಗಳು ಆ ಆಹಾರದಲ್ಲಿಯೇ ಇದ್ದರು. ನಾವೂ ಮತ್ತೆ ಅಲ್ಲಿಗೇ ಹೋಗಬೇಕು. ಮಿಕ್ಕೆಲ್ಲವೂ ಅದಕ್ಕಿಂತ ಕೆಳದರ್ಜೆಯ ಆಹಾರಗಳು. ಒಮ್ಮೆಗೇ ಜಿಗಿಯಲು ಆಗದಿರುವುದರಿಂದ ಕೊಂಚ ನಿಧಾನವಾಗಿ ಪ್ರಯಾಣ ಮಾಡೋಣ. ಅದಕ್ಕೆ ಮಧ್ಯಸ್ಥ ಆಹಾರವನ್ನು ಮೆಟ್ಟಲಾಗಿ ಮಾಡಿಕೊಂಡು ಅಸಹಜತೆಯನ್ನು ಬಿಟ್ಟು ಸಹಜತೆಯ ಕಡೆಗೆ ನಮ್ಮ ಪಯಣ. ಸಧೃಡ ಶರೀರವಿಲ್ಲದೆ ಯಾವ ಸಾಧನೆಯೂ ಸಾಧ್ಯವಿಲ್ಲ.
ನೈಸರ್ಗಿಕ ಆಹಾರದಿಂದ ದೇಹ ಸಧೃಡ, ರೋಗಕೆ ಕಾರಣ ಬರೀ ಚಪಲವೋ ಮೂಢ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ