ಶನಿವಾರ, ಫೆಬ್ರವರಿ 2, 2008

ಯುವಕ ಯುವತಿಯರ ಆಹಾರ

ಯುವಕ ಯುವತಿಯರ ಆಹಾರ

'ಯುವಕಸ್ತಾವತ್ ಯುವತೀಸಕ್ತಃ'- ಯುವಕನ ಆಸಕ್ತಿ ಯುವತಿಯಲ್ಲಿ! ಯುವಕರಿಗೆ ಆಹಾರದ ವಿಷಯದಲ್ಲಿ ವಿಶೇಷ ಆಸಕ್ತಿಯಿರುವುದಿಲ್ಲ. ಹೋಟೆಲುಗಳು, ರಸ್ತೆಯ ಪಕ್ಕದ ಪಾನೀಪೂರಿ ಇತ್ಯಾದಿಗಳಲ್ಲಿ ಗಮನ ಹೆಚ್ಚು. ಕಾರಣ ಸ್ನೇಹಿತೆಯರೊಂದಿಗೆ ಸ್ವಚ್ಚಂದವಾಗಿ ತಿನ್ನಬಹುದಲ್ಲ. ಆದರೆ ಯುವತಿಯರೂ ಆ ರೀತಿಯೇ ತಿಂದರೂ ಸಹ ದಿನಕ್ಕೊಮ್ಮೆ ವಾರ್ ಡ್ರೋಬ್ ನ ಕನ್ನಡಿ ನೋಡಿಕೊಂಡು ದಪ್ಪಗಾದೆನೆಂದು ಕೊರಗುತ್ತಾರೆ! ಡಯಟ್ ಮಾಡಲು ಅನೇಕ ಸ್ತ್ರೀಯರ ಮ್ಯಾಗಝೀನ್ ಗಳು ಸಹಾಯಕ್ಕೆ ಬರುತ್ತವೆ.

ಮೊದಲ ಒಂದು ವಾರ ಡಯಟ್
ಮುಂದಿನ ವಾರ ಪೂರ್ಣ ಹೋಟೆಲ್ ವಿಸಿಟ್

ಹೀಗೆ ಮಾನಸಿಕವಾಗಿ ನರಳುವವರು ಕೆಲವರು. ನಿಜವಾಗಿ ಆಹಾರ ಬಿಟ್ಟು ನರಳುವವರು ಕೆಲವರು. ಈಚೆಗೆ 'ಫಿಗರ್' ಬಗ್ಗೆ ಕಾಳಜಿಯ ಹೆಣ್ಣುಮಕ್ಕಳು ಹೆಚ್ಚುತ್ತಿದ್ದಾರೆ. ಅವರು ಅನ್ನವೇ ತಮ್ಮ ಸಕಲ ದುಃಖಕ್ಕೂ ಕಾರಣವೆಂದು ಅನ್ನವನ್ನು ದ್ವೇಷಿಸಿ ತೃಪ್ತರಾಗುತ್ತಿದ್ದಾರೆ. ಆದರೆ ಅವರ ತೂಕವೇನು ಕಡಿಮೆಯಾಗುತ್ತಿಲ್ಲ. ಯುವಕರು ಈ ಬಗ್ಗೆ ಚಿಂತಿಸುವುದೇ ಇಲ್ಲ. ನಲವತ್ತರ ಮೇಲೆ ಹೊಟ್ಟೆ ಗಣಪನ ಹೊಟ್ಟೆಯೊಂದಿಗೆ ಸ್ಪರ್ಧಿಸಿ ಗೆದ್ದಮೇಲೆ ಡಾಕ್ಟರರ ಸಲಹೆಯಂತೆ ಡಯಟ್ ಮಾಡಲು ಒಲ್ಲದ ಮನಸ್ಸಿನಿಂದ ಪ್ರಾರಂಭ. ಇಬ್ಬರೂ ವೈಜ್ನಾನಿಕವಾಗಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರವರ ಎತ್ತರಿಕ್ಕಿರಬೇಕಾದ ತೂಕದ ಚಾರ್ಟ್, ಕ್ಯಾಲೋರಿ, ಡಯಟ್ ಯಾವುದೂ ಅವರ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆಲ್ಲಾ ಅವರು ತಿನ್ನುತ್ತಿರುವ ಸತ್ತ ಆಹಾರ(ಜಂಕ್ ಫುಡ್) ಕಾರಣ. ರಸ್ತೆಯ ಬದಿಯ ಆಹಾರ ಸೇವಿಸುವುದು ಆರೋಗ್ಯಕರವೇ? ಅವರಿಗೆ ಅದು ಗೊತ್ತಿಲ್ಲವೇ? ಎಲ್ಲವೂ ಗೊತ್ತಿದೆ. ಆದರೆ ಅನುಷ್ಠಾನದಲ್ಲಿಲ್ಲ. ಹೋಟೆಲ್ಗಳು, ಪಾನೀಪುರಿ ಅಂಗಡಿಗಳು, ನಾರ್ತ್ ಇಂಡಿಯನ್, ಚೈನೀ, ಬೇಕರಿಗಳು ಇತ್ಯಾದಿ ಹೊಸ ತರಹೆಯ ನಾನಾ ನಮೂನೆಯ ಆಕರ್ಷಣೀಯವಾದ ಆಹಾರದ ತಾಣಗಳು ಇಂದು ಹೆಚ್ಚು ಹೆಚ್ಚು ಯುವಕ ಯುವತಿಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.

ಮುಖ್ಯವಾದ ವಿಷಯ, ವ್ಯಾಯಾಮ ಹಾಗೂ ಸರಿಯಾದ ಆಹಾರವನ್ನು ಅವರು ಅಳವಡಿಸಿಕೊಳ್ಳಬೇಕು. ಯುವಕ ಯುವತಿಯರ ವಿಷಯದಲ್ಲಿ ಸರಿಯಾದ ಮೊದಲ ಆದ್ಯತೆಯ ಆಹಾರವೆಂದರೆ ಹಲ್ಲಿಗೆ ವ್ಯಾಯಾಮವನ್ನು ಒದಗಿಸುವ(ಚ್ಯೂಯಿಂಗ್ ಗಮ್ ಅಲ್ಲ) ಆಹಾರವೇ, ಮಿಕ್ಕ ಆಹಾರಗಳೆಲ್ಲವೂ ದ್ವಿತೀಯ ದರ್ಜೆಯ ಆಹಾರ. ಇಡ್ಲಿ, ದೋಸೆ, ಬಿಳಿಯ ಬ್ರೆಡ್ ಇತ್ಯಾದಿಗಳಿಗೆಲ್ಲಾ ಹಲ್ಲಿನ ಅವಶ್ಯಕತೆ ಇದೆಯೇ? ಇವಕ್ಕೇ ಈಗ ಪ್ರಥಮ ಸ್ಥಾನ. ಅದಕ್ಕೇ ಬೇಗ ಹಲ್ಲುಗಳನ್ನು ಕಳೆದುಕೊಳ್ಳುವಿಕೆ. ಮೇಲಿನ ಆಹಾರವನ್ನು ಹಲ್ಲು ಹೋದ ಮೇಲೆ ತಿನ್ನುವಿರಂತೆ. ಆದರೆ, ಮೊಳಕೇಕಾಳುಗಳನ್ನು ಅಗಿದು ತಿನ್ನುವ, ಸೀಬೆ, ಸೇಬು ಇತ್ಯಾದಿಗಳನ್ನು ಕಚ್ಚಿ ತಿನ್ನುವ, ಚಪಾತಿಯನ್ನು ಅಗಿಯುವ, ಕಬ್ಬನ್ನು ಸಿಗಿಯುವ ಆನಂದ, ಇದನ್ನೆಲ್ಲಾ ಯಾವಾಗ ಅನುಭವಿಸುತ್ತೀರಿ?

ಇದಕ್ಕೆಲ್ಲಾ ವೇಳೆಯಿಲ್ಲ! ಹಾಗಾದರೆ ವೇಳೆಯನ್ನು ಹೇಗೆ ಉಪಯೋಗಿಸುತ್ತೀರಿ? "ಓದಿಗೆ, ಆಟಕ್ಕೆ" "ಏನು ಆಟ ಆಡುತ್ತೀರ?" "ಇಲ್ಲ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತೇವೆ." ಸಾರ್ಥಕವಾಯಿತು!! ಆಟ ಆಡಲಿಕ್ಕೋ ಅಥವ ಬರೀ ನೋಡಲಿಕ್ಕೋ? ಇಂತಹ ಆಟ, ಅಂತಹ ಊಟದ ನಮ್ಮ ಭವ್ಯ ಭಾರತದ ಮುಂದಿನ ಪ್ರಜೆಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ!!

ಮೊದಲ ಸ್ಥಾನ ಮೊಳಕೆಯ ಕಾಳುಗಳು, ಕ್ಯಾರಟ್, ಬೀಟ್ ರೂಟ್ ಇತ್ಯಾದಿ ಹಸಿಯ ತರಕಾರಿಗಳು, ಸೇಬು, ಸೀಬೆ, ಹಲಸು ಇತ್ಯಾದಿ ಹಣ್ಣುಗಳು, ಕಬ್ಬು. ಬೇಯಿಸಿದ ಆಹಾರಕ್ಕೆ ಎರಡನೆಯ ಸ್ಥಾನ. ಅದರಲ್ಲೂ ಚಪಾತಿ, ರೊತ್ತಿ ಇತ್ಯಾದಿಗಳು ಮುಖ್ಯ. ಮೆತ್ತಗಿರುವ ಆಹಾರ ಹಲ್ಲು ಬಾರದ ಮಕ್ಕಳಿಗೂ ಅದಕ್ಕಿಂತ ಹೆಚ್ಚಾಗಿ ಮಿದುಕರಿಗೇ ಇರಲಿ ಬಿಡಿ! ಯುವಕರು ಹಲ್ಲಿಗೆ ಕೆಲಸ ಕೊಡದೆ ಆಹಾರ ಸೇವಿಸುವುದು ಮಹಾಪರಾಧ. ಹುಡುಗರಾಗಿದ್ದಾಗ ಮಾಡಿದ ತಪ್ಪಿನಿಂದ ಹಲ್ಲುಗಳು ಆಗಲೇ ಸಾಕಷ್ಟು ಹಾಳಾಗಿರುತ್ತವೆ.
ಈಗಲೂ ಮೃದುವಾದ ಆಹಾರ ಸೇವಿಸಿ ಬೇಗ ಹಲ್ಲುಗಳ ಗೋರಿಯನ್ನು ತೋಡುವುದೇ! ಅಗಿಯುವುದರ ಆನಂದ ಅಗಿದೇ ಅನುಭವಿಸಬೇಕು. ಬರೀ ಬರೆದು ಏನು ಪ್ರಯೋಜನ? ಯುವಕ, ಯುವತಿಯರು ದಪ್ಪ, ಸಣ್ಣ ಇತ್ಯಾದಿಗಳ ಬಗ್ಗೆ ವೃಥಾ ಚಿಂತಿಸದೆ ಹಲ್ಲನ್ನು ಉಪಯೋಗಿಸಿ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಿದರೆ ತನ್ನ ತಂದೆ, ತಾಯಿಯರಿಂದ ಪಡೆದ ಜೀನ್ ಗೆ ಅನುಗುಣವಾಗಿ ತೂಕ, ಎತ್ತರ ಎಲ್ಲವೂ ಸಹಜವಾಗಿ ಬರುತ್ತದೆ. ವಂಶವಾಹಿನಿಯಲ್ಲಿ ಬಾರದಿರುವುದನ್ನು ಯಾವ ಸಾಧನದಿಂದಲೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಆಹಾರ, ಉತ್ತಮ ವ್ಯಾಯಾಮ ನೀವು ಮಾಡಬೇಕಾದ ಜೀವವಿಮೆ. ಇದರ ಬಗ್ಗೆ ಚಿಂತಿಸಿ.

ಒಂದು ದಿನದ ಆಹಾರದ ಮಾದರಿ :
ಬೆಳಿಗ್ಗೆ : ೦೫-೦೦ ಒಂದು ಚೊಂಬು ನೀರು, (ನಂತರ ವ್ಯಾಯಾಮ, ಯೋಗಾಸನ, ಈಜು, ಓಟ, ಆಟ ಇತ್ಯಾದಿ)
೦೭-೦೦ ಬಿಸಿ ನೀರು + ಬೆಲ್ಲ + ನಿಂಬೆಹಣ್ಣು
೦೯-೦೦ ರೊಟ್ಟಿ, ಚಪಾತಿ(ಸೂಖ) ಇತ್ಯಾದಿ ೪೦% + ತರಕಾರಿಗಳ ಸಲಾಡ್ ೬೦%
ಮಧ್ಯಾನ್ಹ ೧೨-೦೦ ಹಿಟ್ಟು + ಬೇಯಿಸಿದ ತರಕಾರಿ + ಮಜ್ಜಿಗೆ + ಒಂದು ಹಸಿಯ ಕ್ಯಾರಟ್(ಈರುಳ್ಳಿ) ಕಡಿದು ತಿನ್ನಬೇಕು.
ಸಂಜೆ ೦೫-೦೦ ಬಾಳೆಯ ಹಣ್ಣು + ಋತುಮಾನದ ಹಣ್ಣು(ಬೇಕಿದ್ದಲ್ಲಿ).
ಆಟ-ಬೆವರು ಬೀಳುವಂತೆ)
ರಾತ್ರಿ ೦೮-೦೦ ಮೊಳಕೆಯ ಗೋಧಿ ೨ ಹಿಡಿ + ಬೆಂಡ ಖರ್ಜೂರ + ತೆಂಗಿನಕಾಯಿ + ೧ ಲೋಟ ಹಾಲು + ಹಣ್ಣುಗಳು, ಅಥವಾ ಮೊಳಕೆಯ ಹೆಸರುಕಾಳು(ಮೆಂಥ್ಯ, ಬಟಾಣಿ, ಕಡ್ಲೆ) + ತೆಂಗಿನ ತುರಿ + ತರಕಾರಿಯ ಸಲಾಡ್ = ಮಜ್ಜಿಗೆ.

2 ಕಾಮೆಂಟ್‌ಗಳು:

click4nothing ಹೇಳಿದರು...

ಎಕ್ಸಲೆಂಟ್ ಆರ್ಟಿಕಲ್ ಆರೋಗ್ಯಕ್ಕೆ ಸಂಬಂಧಿಸಿದ ಇಂಥ ಒಳ್ಳೆ ಆರ್ಟಿಕಲ್ ನಾ ಇದುವರೆಗೂ ಓದಿಲ್ಲ...... its funny and contains lots of information....... ಮುಂದೆಯೂ ಇದೇ ರೀತಿಯ ಹಾಸ್ಯಮಯ ಆರೋಗ್ಯದ ಲೇಖನಗಳನ್ನು ನಿಮ್ಮಿಂದ ನಿರೀಕ್ಷಿಸುವೆ......

Unknown ಹೇಳಿದರು...

thank u very much for ur timely comments.